ನವದೆಹಲಿ: ಹಸೆಮಣೆ ಏರಬೇಕಿದ್ದ ಮಹಿಳೆಯೊಬ್ಬರು ರೋಲರ್ ಕೋಸ್ಟರ್ ಅವಘಡದಲ್ಲಿ ದಾರುಣ ಅಂತ್ಯ ಕಂಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ದೆಹಲಿಯ ಹೊರವಲಯದಲ್ಲಿರುವ ಜನಪ್ರಿಯ ಮನೋರಂಜನಾ ಉದ್ಯಾನವನದಲ್ಲಿ 24 ವರ್ಷದ ಪ್ರಿಯಾಂಕಾ ಎಂಬಾಕೆ ತಮ್ಮ ಮದುವೆಗೆ ಕೆಲವೇ ತಿಂಗಳುಗಳ ಮೊದಲು ರೋಲರ್ ಕೋಸ್ಟರ್ ಅವಘಡದಲ್ಲಿ ಸಾವನ್ನಪ್ಪಿದ್ದಾರೆ.
ನಿಶ್ಚಿತಾರ್ಥವಾದ ವರನೊಂದಿಗೆ ನೈಋತ್ಯ ದೆಹಲಿಯ ಕಪಶೇರಾ ಬಳಿಯ ಫನ್ ಎನ್ ಫುಡ್ ವಾಟರ್ ಪಾರ್ಕ್‌ಗೆ ಭೇಟಿ ನೀಡಿದ್ದರು. ರೋಲರ್ ಕೋಸ್ಟರ್ ಆಡುವಾಗ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ.
ಪ್ರಿಯಾಂಕಾ ತನ್ನ ನಿಶ್ಚಿತ ವರ ನಿಖಿಲ್ ಜೊತೆ ವಾಟರ್ & ಅಮ್ಯೂಸ್‌ಮೆಂಟ್ ಪಾರ್ಕ್‌ಗೆ ಹೋಗಿದ್ದರು. ಸ್ವಿಂಗ್ ತರಹದ ರೈಡ್‌ನಲ್ಲಿ ಕುಳಿತಿದ್ದ ಪ್ರಿಯಾಂಕಾ, ಸ್ಟ್ಯಾಂಡ್ ಮುರಿದಾಗ ಎತ್ತರದಿಂದ ಕೆಳಗೆ ಬಿದ್ದರು. ಗಂಭೀರ ಗಾಯಗೊಂಡಿದ್ದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಪ್ರಿಯಾಂಕಾ 2023ರ ಜನವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. 2026 ರ ಫೆಬ್ರವರಿಗೆ ಮದುವೆ ನಿಗದಿಯಾಗಿತ್ತು. ಪ್ರಿಯಾಂಕಾ ನೆರೆಯ ನೋಯ್ಡಾದ ಖಾಸಗಿ ಟೆಲಿಕಾಂ ಕಂಪನಿಯಲ್ಲಿ ಸೇಲ್ಸ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು.