ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ (Delhi) ದಿನೇ ದಿನೇ ಗ್ಯಾಸ್ ಚೇಂಬರ್ ಆಗಿ ಬದಲಾಗ್ತಿದೆ. ದೆಹಲಿಯಲ್ಲಿನ ದಟ್ಟ ಮಂಜು ಜನಸಾಮಾನ್ಯರು ಹಾಗೂ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಆದ್ದರಿಂದ ದೆಹಲಿಯ ಎಲ್ಲಾ ಶಾಲೆಗಳಲ್ಲೂ ನರ್ಸರಿಯಿಂದ 5ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ (Students( ಕಡ್ಡಾಯ ಆನ್‌ಲೈನ್ ತರಗತಿಗೆ ಸರ್ಕಾರ ಸೂಚಿಸಿದೆ.
ವಾಯು ಗುಣಮಟ್ಟ ಕುಸಿಯುತ್ತಿದ್ದರಿಂದ ದೆಹಲಿ ಸರ್ಕಾರ (Delhi Government) ಪೋಷಕರಿಗೆ ಈವರೆಗೆ 2 ಆಯ್ಕೆಗಳನ್ನ ನೀಡಿತ್ತು. ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುವುದು ಅಥವಾ ಆನ್‌ಲೈನ್ ತರಗತಿಗಳನ್ನ ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಿತ್ತು. ಆದ್ರೆ ಇಂದು ವಾಯುಗುಣಮಟ್ಟ ಸೂಚ್ಯಂಕ (AQI) 500ಕ್ಕೆ ತಲುಪಿದ ಹಿನ್ನೆಲೆ ಆಯ್ಕೆಗಳನ್ನ ಹಿಂಪಡೆದಿದೆ. ನರ್ಸರಿಯಿಂದ 5ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಎಲ್ಲಾ ಶಾಲೆಗಳಲ್ಲೂ ಕಡ್ಡಾಯ ಆನ್‌ಲೈನ್ ಕ್ಲಾಸ್ (Online Class) ನಡೆಸಲು ಆದೇಶಿಸಿದೆ.
ಸರ್ಕಾರದ ಆದೇಶದನ್ವಯ ಶಿಕ್ಷಣ ಇಲಾಖೆ ಇಂದು ಸಂಜೆಯೇ ಸುತ್ತೋಲೆ ಹೊರಡಿಸಿದೆ. ವಾಯುಗುಣಮಟ್ಟ ಗಮನದಲ್ಲಿಟ್ಟಿಕೊಂಡು ದೆಹಲಿ ಎಲ್ಲಾ ಸರ್ಕಾರಿ, ಸರ್ಕಾರಿ ಅನುದಾನಿತ, ಅನುದಾನರಹಿತ, ಖಾಸಗಿ ಶಾಲೆಗಳು 5ನೇ ತರಗತಿವರೆಗೆ ಆನ್‌ಲೈನ್ ಕ್ಲಾಸ್ ಕಡ್ಡಾಯಗೊಳಿಸುವಂತೆ ಸೂಚಿಸಿದೆ. ಮುಂದಿನ ಆದೇಶದ ವರೆಗೆ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳನ್ನ ಸ್ಥಗಿತಗೊಳಿಸಿರುವುದಾಗಿ ತಿಳಿಸಿದೆ.
ಕೂಡಲೇ ಈ ಆದೇಶ ಜಾರಿಗೊಳಿಸಬೇಕು, ಜೊತೆಗೆ ಪೋಷಕರ ಗಮನಕ್ಕೂ ತರಬೇಕು ಎಂದು ಎಲ್ಲಾ ಶಾಲೆಗಳ ಮುಖ್ಯಸ್ಥರಿಗೂ ಶಿಕ್ಷಣ ಇಲಾಖೆ ನಿರ್ದೇಶನ ನೀಡಿದೆ.
ವಿಷವಾಗುತ್ತಿದೆಯಾ ಉಸಿರಾಡುವ ಗಾಳಿ
ರಾಜಧಾನಿ ದೆಹಲಿ ವಾಯುಗುಣಮಟ್ಟ ಸೂಚ್ಯಂಕ 500ಕ್ಕೆ ತಲುಪಿದೆ. ಹವಾಮಾನ ವೈಪರೀತ್ಯದಿಂದಾಗಿ ಇವತ್ತು ಸುಮಾರು 66 ವಿಮಾನಗಳನ್ನು ಸ್ಥಗಿತಗೊಳಿಸಲಾಗಿದ್ದು, ನಾನಾ ಭಾಗಗಳಿಗೆ ಹೊರಡಬೇಕಿದ್ದ 60 ರೈಲುಗಳನ್ನು ಕ್ಯಾನ್ಸಲ್ ಮಾಡಲಾಗಿದೆ. ಈ ಮಧ್ಯೆ, ಜೋರ್ಡಾನ್, ಇಥಿಯೋಪಿಯಾ, ಓಮನ್ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿಗೂ ವಾಯುಮಾಲಿನ್ಯ ಎಫೆಕ್ಟ್ ತಟ್ಟಿದೆ. ದೆಹಲಿಯಲ್ಲಿ ದಟ್ಟ ಮಂಜಿನಿಂದಾಗಿ ವಿಮಾನ ಸರಿಯಾದ ಸಮಯಕ್ಕೆ ತೆರಳದ ಪರಿಣಾಮ ಪ್ರಧಾನಿ ಮೋದಿ ವಿದೇಶ ಪ್ರವಾಸ ವಿಳಂಬವಾಗಿದೆ.
ಬೆಳಗ್ಗೆ 8.30ಕ್ಕೆ ತೆರಳಬೇಕಿದ್ದ ವಿಮಾನ ಸ್ವಲ್ಪ ಸಮಯ ತಡವಾಗಿ ಟೇಕಾಫ್ ಆಗಿದೆ. ದೆಹಲಿಯ ದಟ್ಟ ಮಂಜು ಬಗ್ಗೆ ಸುಪ್ರೀಂ ಕೋರ್ಟ್ ಕಲಾಪಕ್ಕೂ ತಟ್ಟಿದೆ. ವಕೀಲರು ಹಾಗೂ ಅರ್ಜಿದಾರರು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಧೀಶರು ಸಲಹೆ ನಿಡಿದ್ದಾರೆ.
ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇನಲ್ಲಿ ಅಪಘಾತ
ಇನ್ನು, ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇನಲ್ಲಿ ಬೆಳಗ್ಗೆ ದಟ್ಟವಾದ ಮಂಜು ಆವರಿಸಿದ ಕಾರಣ ಸರಣಿ ಅಪಘಾತಗಳು ಸಂಭವಿಸಿವೆ. ರಾನಿಯಾಲ ಗ್ರಾಮದ ಬಳಿ ಸುಮಾರು ವಾಹನಗಳು ಒಂದರ ನಂತರ ಒಂದರಂತೆ ಡಿಕ್ಕಿಯಾಗಿವೆ. ಭೀಕರ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. 20 ವಾಹನಗಳು ಜಖಂಗೊಂಡಿವೆ.



