– ಪತಿ, ಅತ್ತೆ, ಮಾವನ ವಿರುದ್ಧ ಕಿರುಕುಳದ ಆರೋಪ
ನವದೆಹಲಿ: ರಕ್ಷಣಾ ಸಚಿವಾಲಯದಲ್ಲಿ(Defence Ministry) ಸಹಾಯಕ ವಿಭಾಗಾಧಿಕಾರಿಯಾಗಿದ್ದ (ASO) ಮೂರು ತಿಂಗಳ ಗರ್ಭಿಣಿಯೊಬ್ಬರು ದೆಹಲಿಯ(Delhi) ದ್ವಾರಕಾದಲ್ಲಿರುವ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ನಾಜಿಯಾ ಖಾನಂ (30) ಮೃತಪಟ್ಟಿದ್ದು, ಈ ಸಾವಿಗೆ ಪತಿ ಹಾಗೂ ಅತ್ತೆ-ಮಾವನ ನಿರಂತರ ದೈಹಿಕ ಮತ್ತು ಮಾನಸಿಕ ಕಿರುಕುಳವೇ ಕಾರಣ ಎಂದು ಮೃತಳ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ನಾಜಿಯಾ ಖಾನಂ(Naziya Khanam) ಅವರಿಗೆ ಕಳೆದ ಏಪ್ರಿಲ್ 11 ರಂದು ಅಜ್ಮ್ ಅಲಿ ಖಾನ್ ಎಂಬಾತನೊಂದಿಗೆ ವಿವಾಹವಾಗಿತ್ತು. ಮದುವೆಯಾದ ಕೆಲವೇ ದಿನಗಳಲ್ಲಿ ಪತಿ ಅಜ್ಮ್ ಅಲಿ ಖಾನ್, ಅತ್ತೆ ಸಮೀನ್ ನಿಶಾ, ಮಾವ ಬಾಬರ್ ಅಲಿ ಖಾನ್ ಹಾಗೂ ಕುಟುಂಬದ ಇತರ ಸದಸ್ಯರು ನಿರಂತರವಾಗಿ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದರು ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ.
ಪದೇಪದೇ ಬೈದು, ಹಲ್ಲೆ ನಡೆಸಿ, ಮನೆಯಿಂದ ಹೊರಹಾಕುವುದಾಗಿ ಹಾಗೂ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರು ಎಂದು ನಾಜಿಯಾ ಅವರ ತಂದೆ ತೌವಾಬ್ ಖಾನ್ ದೂರಿದ್ದಾರೆ.
ಮೂರು ತಿಂಗಳ ಗರ್ಭಿಣಿಯಾಗಿದ್ದ ನಾಜಿಯಾ, ತನಗೆ ಆಗುತ್ತಿದ್ದ ದೌರ್ಜನ್ಯದ ಬಗ್ಗೆ ತವರು ಮನೆಗೆ ಫೋನ್ ಮೂಲಕ ತಿಳಿಸುತ್ತಿದ್ದರು. ಎಷ್ಟೇ ತಿಳಿಹೇಳಿದರೂ ಪತಿಯ ವರ್ತನೆಯಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ ಎನ್ನಲಾಗಿದೆ. ಇದನ್ನೂ ಓದಿ: ಒಡಿಶಾ ಕರಾವಳಿಯಲ್ಲಿ ಪನಾಮ ಧ್ವಜ ಹೊತ್ತ ಹಡಗು ಮುಳುಗಡೆ – ಇಬ್ಬರ ರಕ್ಷಣೆ, 22 ಮಂದಿ ನಾಪತ್ತೆ
ಆಗಸ್ಟ್ 21 ರಂದು ಅಸ್ವಸ್ಥ ಸ್ಥಿತಿಯಲ್ಲಿದ್ದ ನಾಜಿಯಾ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.
ಪೊಲೀಸರ ವಿಚಾರಣೆ ವೇಳೆ ಪತಿ ಅಜ್ಮ್ ಅಲಿ ಖಾನ್, ನಮ್ಮಿಬ್ಬರ ನಡುವೆ ಜಗಳ ನಡೆದಿತ್ತು. ಈ ವೇಳೆ ನಾಜಿಯಾ ನನ್ನನ್ನು ಒಂದು ಕೋಣೆಯಲ್ಲಿ ಕೂಡಿ ಹಾಕಿ ಮತ್ತೊಂದು ಕೋಣೆಗೆ ತೆರಳಿದಳು. ನಂತರ ನಾನು ಮನೆ ಮಾಲೀಕರನ್ನು ಕರೆದು, ಬಾಲ್ಕನಿ ಮೂಲಕ ಏಣಿಯ ಸಹಾಯದಿಂದ ಹೊರಬಂದೆ. ಕಿಟಕಿಯಿಂದ ಇಣುಕಿ ನೋಡಿದಾಗ ನಾಜಿಯಾ ಫ್ಯಾನ್‌ಗೆ ನೇಣು ಬಿಗಿದುಕೊಂಡಿರುವುದು ಕಂಡುಬಂತು ಎಂದು ಹೇಳಿಕೆ ನೀಡಿದ್ದಾನೆ.
ನಾಜಿಯಾ ಅವರ ತಂದೆ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ದಾಖಲಿಸಿದ್ದು, ಇದು ಆತ್ಮಹತ್ಯೆಯಲ್ಲ, ಅತ್ತೆ-ಮಾವನ ಮನೆಯವರೇ ಯೋಜಿತವಾಗಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.
ಸದ್ಯ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 85 (ಪತಿ ಅಥವಾ ಸಂಬಂಧಿಕರಿಂದ ಕ್ರೌರ್ಯ) ಹಾಗೂ ಸೆಕ್ಷನ್ 108 (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ.

