ನವದೆಹಲಿ: ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ಮದುವೆಗೆ ಹೋಗಿ ಹಿಂದಿರುಗುವಾಗ ಇಬ್ಬರು ಮಕ್ಕಳು ದುರ್ಮರಣಕ್ಕೀಡಾದ ಆಘಾತಕಾರಿ ಘಟನೆಯೊಂದು ದೆಹಲಿಯಲ್ಲಿ ನಡೆದಿದೆ.
ಈ ಘಟನೆ ದೆಹಲಿಯ ಆದರ್ಶನಗರದಲ್ಲಿ ಶುಕ್ರವಾರ ರಾತ್ರಿ ನಡದಿದ್ದು, ಮೃತ ದುರ್ದೈವಿ ಮಕ್ಕಳನ್ನು ಅಕ್ಷರಾ(9) ಮತ್ತು ಸಾರ್ಥಕ್(7) ಎಂದು ಗುರುತಿಸಲಾಗಿದೆ.
Advertisement
ಘಟನೆ ವಿವರ: ವಿನೀತ್ ಗಾರ್ಗ್ ತನ್ನ ಮಕ್ಕಳಿಬ್ಬರನ್ನು ಅಜ್ಜಿ ಜೊತೆ ಬಿಟ್ಟು ಪತ್ನಿ ಜೊತೆ ಆಲಿಪುರದಲ್ಲಿರೋ ಮದುವೆ ಸಮಾರಂಭಕ್ಕೆ ತೆರಳಿದ್ದಾರೆ. ಇತ್ತ ನೆರೆಮನೆಯವರು ಅಜ್ಜಿ ಹಾಗೂ ಮಕ್ಕಳಿದ್ದ ಎರಡನೇ ಮಹಡಿಯಲ್ಲಿ ಹೊಗೆಯಾಗುತ್ತಿರುವುದನ್ನು ಗಮನಿಸಿದ್ದು, ಮೂರನೇ ಮಹಡಿಯಲ್ಲಿದ್ದ ಮಹಿಳೆಯನ್ನು ರಕ್ಷಿಸಿದ್ದಾರೆ. ಇದೇ ವೇಳೆ 4ನೇ ಮಹಡಿಯಲ್ಲಿದ್ದ ದಂಪತಿ ಅವರನ್ನು ರಕ್ಷಿಸಲು ನಿರ್ದೇಶನಗಳನ್ನು ನೀಡುತ್ತಿದ್ದರು. ಈ ಮಧ್ಯೆ ಇಬ್ಬರು ಮಕ್ಕಳು ಮನೆಯೊಳಗಡೆಯೇ ಸಿಲುಕಿಕೊಂಡಿದ್ದಾರೆ. ವಾಶ್‍ರೂಂ ನಲ್ಲಿದ್ದ ಸಾರ್ಥಕ್ ಉಸಿರುಗಟ್ಟಿ ಸಾವನ್ನಪ್ಪಿದ್ದರೆ, ಅಕ್ಷರಾ ಟೆರೇಸ್ ಬಾಗಿಲು ತೆಗೆಯುವ ವೇಳೆ ಮೈಮೇಲೆ ಬೆಂಕಿ ಹೊತ್ತಿಕೊಂಡು ಮೆಟ್ಟಿಲಿನಲ್ಲಿಯೇ ಸಜೀವ ದಹನವಾಗಿದ್ದಾಳೆ.
Advertisement
ವಿನೀತ್ ಸಹೋದರ ಕೂಡ ಇದೇ ಕಟ್ಟಡದ ಪ್ರಥಮ ಮಹಡಿಯಲ್ಲಿ ಪತ್ನಿ ಜೊತೆ ವಾಸವಾಗಿದ್ದಾರೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆಯೇ ವಿನೀತ್ ನಾದಿನಿ ಎರಡನೇ ಮಹಡಿಗೆ ತೆರಳಿ ಅತ್ತೆ ಮತ್ತು ಆಕೆಯ ಇಬ್ಬರು ಮಕ್ಕಳನ್ನು ನೆಲಮಹಡಿಗೆ ಕರೆದುಕೊಂಡು ಬಂದಿದ್ದು, ಅಪಾಯದಿಂದ ಪಾರಾಗಿದ್ದಾರೆ. ವಿನೀತ್ ಅವರ ಇಬ್ಬರು ಮಕ್ಕಳು ಮಲಗಿದ್ದರಿಂದ ಅವರನ್ನು ರಕ್ಷಿಸಲು ಸಾಧ್ಯವಾಗಿಲ್ಲ. ಆದ್ರೆ ಹೊಗೆಯಿಂದ ಎಚ್ಚರಗೊಂಡ ಮಕ್ಕಳು ತಮ್ಮನ್ನು ತಾವು ಕಾಪಾಡಿಕೊಳ್ಳಲು ಪ್ರಯತ್ನಿಸಿದರಾದರೂ ಪ್ರಯೋಜನವಾಗಿಲ್ಲ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆಯೇ ವಿನೀತ್ ತಾಯಿ ವಿದ್ಯುತ್ ಹರಿಯುವ ಎಂಸಿಬಿಯನ್ನು ಆಫ್ ಮಾಡಿದ್ದಾರೆ ಅಂತ ಸಂಬಂಧಿ ಗಿರಿಧರಿ ಲಾಲ್ ಹೇಳಿದ್ದಾರೆ.
Advertisement
ಕಟ್ಟಡಕ್ಕೆ ಬೆಂಕಿ ಆವರಿಸಲು ಆರಂಭಿಸಿದಾಗ ನಾನು ಪ್ರಥಮ ಮಹಡಿಗೆ ಹೋದೆ. ಈ ವೇಳೆ ಯಾರೋ ಒಬ್ಬರು ವೃದ್ಧೆಯನ್ನು ಕೆಳಗಿನ ಮಹಡಿಗೆ ಕರೆತರಲು ಪ್ರಯತ್ನಿಸುತ್ತಿದ್ದರು. ಈ ವೇಳೆ ವೃದ್ಧೆ ಮಕ್ಕಳಿರುವುದರ ಬಗ್ಗೆ ಹೇಳಿದ್ದಾರೆ. ಆದ್ರೆ ಅವರನ್ನು ರಕ್ಷಿಸಲು ಪ್ರಯತ್ನಿಸುವ ವೇಳೆ ಬೆಂಕಿ ಮಹಡಿಗೆ ಆವರಿಸಿದ್ದು, ಮಕ್ಕಳು ಮನೆಯೊಳಗೆ ಸಿಲುಕಿದ್ದರು ಅಂತ ನೆರೆಮನೆಯ ಅಶೋಕ್ ಬನ್ಸಾಲ್ ತಿಳಿಸಿದ್ದಾರೆ.
Advertisement
ಬೆಂಕಿ ಕಂಟ್ರೋಲ್ ಗೆ ಬರುತ್ತಿದ್ದಂತೆಯೇ ಮಕ್ಕಳನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಅವರು ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಪ್ರಥಮ ಮಹಡಿಯಲ್ಲಿದ್ದ ಎಸಿಯಲ್ಲಿ ಬೆಂಕಿಯ ಕಿಡಿಕಾಣಿಸಿಕೊಂಡಿದ್ದೇ ಈ ಘಟನೆ ಕಾರಣ ಎನ್ನಲಾಗಿದೆ.
ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಮಧ್ಯರಾತ್ರಿ 12.30ರ ಸುಮಾರಿಗೆ ವಿನೀತ್ ತನ್ನ ಪತ್ನಿಯೊಂದಿಗೆ ಮನೆಗೆ ವಾಪಸ್ಸಾದಾಗ ಈ ಘೋರ ಅವಘಡ ನಡೆದೇ ಹೋಗಿತ್ತು. ತಮ್ಮಿಬ್ಬರೂ ಮಕ್ಕಳನ್ನು ಕಳೆದುಕೊಂಡ ದಂಪತಿಯ ಆಕ್ರೋಶ ಮುಗಿಲುಮುಟ್ಟಿತ್ತು.