– ಮಾತಿನ ಮೋಡಿಗೆ ಬಿದ್ದು ಖಾಸಗಿ ಫೋಟೋ ಕಳುಹಿಸುತ್ತಿದ್ದ ಯುವತಿಯರು
– ಬೆಳಗ್ಗೆ ಕಂಪನಿ ಕೆಲಸ, ರಾತ್ರಿ ಸೈಬರ್ ಕ್ರೈಂ
ನವದೆಹಲಿ: ಡೇಟಿಂಗ್ ಆಪ್‌ನಲ್ಲಿ (Dating App) ಸ್ನ್ಯಾಪ್‌ಚಾಟ್‌ನಲ್ಲಿ 200 ಮಹಿಳೆಯರಿಗೆ ಅಮೆರಿಕ ಮಾಡೆಲ್ (US Model) ಎಂದು ಹೇಳಿ ವಂಚಿಸಿದ್ದ 23 ವರ್ಷದ ಯುವಕನನ್ನು ದೆಹಲಿ ಪೊಲೀಸರು (Delhi Police) ಬಂಧಿಸಿದ್ದಾರೆ.
ತುಷಾರ್ ಬಿಶ್ತ್ (Tushar Bisht) ಬಂಧಿತ ಆರೋಪಿ. 18 ರಿಂದ 30 ವರ್ಷ ವಯಸ್ಸಿನ ಹುಡುಗಿಯರು ಮತ್ತು ಮಹಿಳೆಯರನ್ನು ಗುರಿಯಾಗಿಸಿಕೊಂಡು ಈತ ನಕಲಿ ಪ್ರೊಫೈಲ್ (Fake Profile) ರಚಿಸಿ ಕೃತ್ಯ ಎಸಗಿ ವಂಚಿಸುತ್ತಿದ್ದ.
ದೆಹಲಿ ನಿವಾಸಿ ತುಷಾರ್ ಬಿಬಿಎ ಪದವಿ ಓದಿದ್ದಾನೆ. ಕಳೆದ ಮೂರು ವರ್ಷಗಳಿಂದ ನೋಯ್ಡಾದ ಖಾಸಗಿ ಕಂಪನಿಯೊಂದರಲ್ಲಿ ಟೆಕ್ನಿಕಲ್ ರಿಕ್ರೂಟರ್ ಆಗಿ ಕೆಲಸ ಮಾಡುತ್ತಿದ್ದರೆ ರಾತ್ರಿ ವಂಚನೆ ಕೆಲಸಕ್ಕೆ ಇಳಿಯುತ್ತಿದ್ದ.
ವಂಚನೆ ಹೇಗೆ?
ನಾನು ಒಂದು ಪ್ರಾಜೆಕ್ಟ್‌ಗಾಗಿ ಭಾರತಕ್ಕೆ ಬಂದಿದ್ದೇನೆ ಎಂದು ಹೇಳಿ ಆರಂಭದಲ್ಲಿ ಪರಿಚಯ ಮಾಡಿಕೊಳ್ಳುತ್ತಿದ್ದ. ಚಾಟಿಂಗ್‌ನಲ್ಲಿ ಮೋಡಿ ಮಾಡಿ ಯುವತಿಯರು ತನ್ನ ಬಲೆಗೆ ಬೀಳಿಸುತ್ತಿದ್ದ. ನಂತರ ಆವರ ಖಾಸಗಿ ಚಿತ್ರವನ್ನು ಕಳುಹಿಸುವಂತೆ ಮನವಿ ಮಾಡುತ್ತಿದ್ದ. ಈತನ ಮಾತಿಗೆ ಮರುಳಾದ ಯುವತಿಯರು, ಮಹಿಳೆಯರು ತಮ್ಮ ಖಾಸಗಿ ಫೋಟೋ, ವಿಡಿಯೋಗಳನ್ನು ಕಳುಹಿಸುತ್ತಿದ್ದರು.
ಫೋಟೋ ಸಿಕ್ಕಿದ ಕೂಡಲೇ ಆತ ಹಣ ಕೇಳಲು ಆಂಭಿಸುತ್ತಿದ್ದ. ಹಣ ನೀಡದೇ ಇದ್ದರೆ ವಿಡಿಯೋ, ಫೋಟೋವನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡುವುದಾಗಿ ಅಥವಾ ಡಾರ್ಕ್ ವೆಬ್‌ನಲ್ಲಿ ಮಾರಾಟ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ. ಈತನ ಬ್ಲ್ಯಾಕ್‌ಮೇಲ್‌ಗೆ (Blackmail) ಹೆದರಿ ಹಲವು ಯುವತಿಯರು ಕೇಳಿದ್ದಷ್ಟು ಹಣವನ್ನು ನೀಡುತ್ತಿದ್ದರು.
ಸಿಕ್ಕಿಬಿದ್ದಿದ್ದು ಹೇಗೆ?
ದೆಹಲಿ ವಿಶ್ವವಿದ್ಯಾನಿಲಯದ (Delhi University) ವಿದ್ಯಾರ್ಥಿನಿಯೊಬ್ಬಳು ಈತನ ನಾಟಕಕ್ಕೆ ಬಲಿಯಾಗಿ ತನ್ನ ಖಾಸಗಿ ಫೋಟೋ, ವಿಡಿಯೋವನ್ನು ವಾಟ್ಸಪ್‌ನಲ್ಲಿ ಕಳುಹಿಸಿದ್ದಳು. ನಂತರದ ದಿನಗಳಲ್ಲಿ ವೈಯಕ್ತಿಕ ಭೇಟಿ ಮಾಡಬೇಕೆಂದು ಈಕೆ ಕೋರಿದಾಗ ತುಷಾರ್ ಪ್ರತಿಬಾರಿಯೂ ಕೆಲಸದ ನೆಪ ಹೇಳಿ ಭೇಟಿಯನ್ನು ತಪ್ಪಿಸುತ್ತಿದ್ದ. ಹೀಗಿದ್ದರೂ ವಿದ್ಯಾರ್ಥಿನಿ ತುಷಾರ್‌ನನ್ನು ನಂಬಿದ್ದಳು. ಇದನ್ನೂ ಓದಿ: ʻನನ್ನ ಹೆಂಡತಿಗೆ ಪಾಠ ಕಲಿಸಿʼ – ಪತ್ನಿಯ ಕಿರುಕುಳದ ಬಗ್ಗೆ ವೀಡಿಯೋ ಮಾಡಿ ವ್ಯಕ್ತಿ ಆತ್ಮಹತ್ಯೆ
ಒಂದು ದಿನ ವಿದ್ಯಾರ್ಥಿನಿಯ ಮೊಬೈಲ್ ಫೋನಿಗೆ ಖಾಸಗಿ ವಿಡಿಯೋ ಬಂದಿದೆ. ತನ್ನ ವಿಡಿಯೋ ನೋಡಿ ಶಾಕ್ ಆಗಿದ್ದಾಳೆ. ಈ ವೇಳೆ ಈ ವಿಡಿಯೋ ಬಂದಿದ್ದು ಬೇರೆ ಯಾರಿಂದಲೂ ಅಲ್ಲ. ಅಮೆರಿಕದ ಮಾಡೆಲ್ ಎಂದು ಪರಿಚಯ ಮಾಡಿಕೊಂಡ ವ್ಯಕ್ತಿಯಿಂದಲೇ ಬಂದಿರುವುದು ತಿಳಿಯುತ್ತದೆ.
ನಂತರ ಚಾಟ್ ವೇಳೆ ತುಷಾರ್ ಹಣ ಕೇಳಿದ್ದಾನೆ. ಯುವತಿ ತನ್ನ ಕೈಲಾದಷ್ಟು ಹಣವನ್ನು ನೀಡಿದ್ದಾಳೆ. ಹಣ ಸಿಕ್ಕಿದ ಬಳಿಕ ಮತ್ತಷ್ಟು ಹಣವನ್ನು ಪಾವತಿ ಮಾಡಬೇಕೆಂದು ಬೇಡಿಕೆ ಇಟ್ಟಿದ್ದಾನೆ. ಈ ವೇಳೆ ಯುವತಿ ನಾನು ಶ್ರೀಮಂತ ಕುಟುಂಬದಿಂದ ಬಂದವಳಲ್ಲ. ನನ್ನ ಬಳಿ ಇಷ್ಟೇ ಹಣ ಇರುವುದು ಎಂದಿದ್ದಾಳೆ. ಹೀಗಿದ್ದರೂ ಆತ ಹೆಚ್ಚಿನ ಹಣಕ್ಕೆ ಬೇಡಿಕೆ ಇಡುತ್ತಲೇ ಇದ್ದ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ವಿದ್ಯಾರ್ಥಿನಿ ತನ್ನ ಮನೆಯವರಿಗೆ ತಿಳಿಸಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾಳೆ.
ಪೊಲೀಸರು ತಾಂತ್ರಿಕ ವಿವರಗಳನ್ನು ಬಳಸಿಕೊಂಡು ತುಷಾರ್ ಬಿಶ್ತ್‌ನನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ವಿಚಾರಣೆ ವೇಳೆ 500ಕ್ಕೂ ಹೆಚ್ಚು ಮಹಿಳೆಯರಿಗೆ ಕಿರುಕುಳ ನೀಡಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ. ತನಿಖೆ ವೇಳೆ ಫೋನಿನಲ್ಲಿ ಸಂಗ್ರಹವಾಗಿದ್ದ ಮಹಿಳೆಯರ ಖಾಸಗಿ ವಿಡಿಯೋಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ.