ನವದೆಹಲಿ: ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ ಸಕ್ಸೇನಾ ತಮ್ಮ ವಿರುದ್ಧದ ಸುಳ್ಳು ಭ್ರಷ್ಟಾಚಾರ ಆರೋಪಗಳಿಗೆ ಸಂಬಂಧಿಸಿದಂತೆ ಎಎಪಿ ನಾಯಕರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
ಎಎಪಿ ಶಾಸಕರಾದ ಅತಿಶಿ, ಸೌರಭ್ ಭಾರದ್ವಾಜ್ ಮತ್ತು ದುರ್ಗೇಶ್ ಪಾಠಕ್ ಸೇರಿದಂತೆ ಇತರ ಎಎಪಿ ನಾಯಕರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ. ಸಕ್ಸೆನಾ 2016ರಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಅಧ್ಯಕ್ಷರಾಗಿದ್ದಾಗ 1,400 ಕೋಟಿ ರೂ. ಭ್ರಷ್ಟಾಚಾರ ಮಾಡಿದ್ದಾರೆ ಎಂದು ಎಎಪಿ ನಾಯಕರು ಆರೋಪಿಸಿದ್ದರು. ಈ ಆರೋಪವನ್ನು ವಿ.ಕೆ ಸಕ್ಸೇನಾ ತಳ್ಳಿಹಾಕಿದ್ದಾರೆ. ಇದನ್ನೂ ಓದಿ: ಲಕ್ಷ್ಮೀನಾರಾಯಣ ಕಾಂಗ್ರೆಸ್‌ಗೆ ರಾಜೀನಾಮೆ- ಬಿಜೆಪಿ ಸೇರಲು ಸಿದ್ಧ
ಕಳೆದ ತಿಂಗಳು ಕೇಜ್ರಿವಾಲ್ ಸರ್ಕಾರದ ಅಬಕಾರಿ ನೀತಿಯಲ್ಲಿನ ಅಕ್ರಮಗಳ ಬಗ್ಗೆ ಸಿಬಿಐ ತನಿಖೆಗೆ ಸಕ್ಸೆನಾ ಶಿಫಾರಸು ಮಾಡಿದ ಬಳಿಕ ಆಡಳಿತ ಪಕ್ಷ ಮತ್ತು ಲೆಫ್ಟಿನೆಂಟ್ ಗವರ್ನರ್ ನಡುವೆ ಜಿದ್ದಾಜಿದ್ದಿ ಆರಂಭವಾಗಿತ್ತು. ಆ ಬಳಿಕ ಲೆಫ್ಟಿನೆಂಟ್ ಗವರ್ನರ್ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಇದೀಗ ಎಎಪಿ ಶಾಸಕರು ಸೇರಿದಂತೆ ದೆಹಲಿಯ ಸಂವಾದ ಮತ್ತು ಅಭಿವೃದ್ಧಿ ಆಯೋಗದ ಉಪಾಧ್ಯಕ್ಷರಾಗಿರುವ ಜಾಸ್ಮಿನ್ ಶಾ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇದೀಗ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಏಪ್ರಿಲ್- ಜೂನ್ GDP ಬೆಳವಣಿಗೆ 13.5% ರಷ್ಟು ಏರಿಕೆ