ನವದೆಹಲಿ: ಅಕ್ಟೋಬರ್ 01 ರಂದು ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ 5G ಟೆಲಿಕಾಂ ಸೇವೆಗಳಿಗೆ ಚಾಲನೆ ನೀಡಲಿದ್ದಾರೆ. ಇದಕ್ಕಾಗಿ ಎಲ್ಲ ರೀತಿಯ ತಯಾರಿಗಳನ್ನು ಮಾಡಿಕೊಳ್ಳಲಾಗುತ್ತಿದೆ. ಇದರ ಭಾಗವಾಗಿ ದೆಹಲಿ ವಿಮಾನ ನಿಲ್ದಾಣವೂ (Delhi Airport) ಸಿದ್ಧವಾಗಿದ್ದು, ದೇಶದ ಮೊದಲ 5G ಸೇವೆ ಲಭ್ಯವಿರುವ ವಿಮಾನ ನಿಲ್ದಾಣ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ ಮೂರರಲ್ಲಿ ಅಕ್ಟೋಬರ್ 1 ರಿಂದಲೇ 5G ಸೇವೆಗಳ ಬಳಕೆಗೆ ವ್ಯವಸ್ಥೆ ಮಾಡಲಾಗಿದೆ. ಟರ್ಮಿನಲ್ 1 ಮತ್ತು 2 ರಲ್ಲೂ ಸಿದ್ಧತೆಗಳು ನಡೆಯುತ್ತಿದ್ದು, ಕೆಲವೇ ದಿನಗಳಲ್ಲಿ ಪೂರ್ಣ ವಿಮಾನ ನಿಲ್ದಾಣವು 5G ಇಂಟರ್ನೆಟ್ ಬಳಕೆಗೆ ಮುಕ್ತವಾಗಲಿದೆ. ಇದನ್ನೂ ಓದಿ: ಶೀಘ್ರವೇ 5G ಸೇವೆ ಆರಂಭ – ನಿಮ್ಮ ಹಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ
ಈಗಾಗಲೇ 5G ಸೆಕ್ಟ್ರಮ್ ಹರಾಜು ಪ್ರಕ್ರಿಯೆ ಅಂತ್ಯವಾಗಿದ್ದು ಜಿಯೋ, ಏರ್ಟೆಲ್, ವೊಡಾಫೋನ್ ಸೆಕ್ಟ್ರಮ್‌ಗಳನ್ನು ಖರೀದಿಸಿದೆ. ಅ.1 ರಂದು ಪ್ರಧಾನಿ ನರೇಂದ್ರ ಮೋದಿ ಹೊಸ ಸೇವೆಗೆ ಚಾಲನೆ ನೀಡಲಿದ್ದು, ಅ.12 ರೊಳಗೆ ಮಹಾನಗರಗಳಲ್ಲಿ 5G ಸೇವೆಗಳನ್ನು ನೀಡಲಾಗುವುದು ಎಂದು ಐಟಿ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದರು.
ಮೊದಲ ಹಂತದಲ್ಲಿ ಮೆಟ್ರೋ ಸಿಟಿಗಳು, ದೊಡ್ಡ ನಗರಗಳಲ್ಲಿ 5G ಸೇವೆ ಆರಂಭವಾಗಲಿದ್ದು, ಹಂತ ಹಂತವಾಗಿ ಗ್ರಾಮೀಣ ಪ್ರದೇಶಗಳಿಗೂ ಸೇವೆಯನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ. ಸೇವಾ ಶುಲ್ಕದಲ್ಲಿ ಭಾರಿ ದೊಡ್ಡ ವ್ಯತ್ಯಾಸವಾಗದು ಎಂದು ಟೆಲಿಕಾಂ ಸಂಸ್ಥೆಗಳು ಮುನ್ಸೂಚನೆ ನೀಡಿವೆ. ಇದನ್ನೂ ಓದಿ: ಅ.1 ರಿಂದ ದೇಶದಲ್ಲಿ 5G ಸೇವೆ ಆರಂಭ – ಮೋದಿ ಚಾಲನೆ