ನವದೆಹಲಿ: ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರ ಅರ್ಜಿಯ ಮೇರೆಗೆ ದೆಹಲಿ ಹೈಕೋರ್ಟ್ ಮಂಗಳವಾರ ಕೇಂದ್ರ ತನಿಖಾ ದಳಕ್ಕೆ (CBI) ನೋಟಿಸ್ ಜಾರಿ ಮಾಡಿದೆ.
ಆಪಾದಿತ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಬಿಐ ತನ್ನನ್ನು ಬಂಧಿಸಿರುವುದನ್ನು ಕೇಜ್ರಿವಾಲ್ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ್ದರು. ಈ ಸಂಬಂಧ ಇಂದು ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ (Neena Bansal Krishna) ನೇತೃತ್ವದ ಪೀಠವು ಪ್ರಕರಣದ ವಿಚಾರಣೆ ನಡೆಸಿತು. ಬಳಿಕ ಕೋರ್ಟ್ ಸಿಬಿಐಗೆ ನೋಟಿಸ್ ಜಾರಿ ಮಾಡಿದ್ದು, 7 ದಿನಗಳಲ್ಲಿ ಉತ್ತರ ನೀಡುವಂತೆ ಸೂಚಿಸಿದೆ.
ಸಿಬಿಐನ ಬಂಧನ ಮತ್ತು ರಿಮಾಂಡ್ ಆದೇಶವನ್ನು ಪ್ರಶ್ನಿಸಿ ಕೇಜ್ರಿವಾಲ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯ ವೇಳೆ, ದೆಹಲಿ ಸಿಎಂ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ (Abhishek Manu Singhvi), ಬಂಧನದ ಅವಶ್ಯಕತೆ ಏನು? ಸಿಬಿಐ ಕೇಜ್ರಿವಾಲ್ ಅವರನ್ನು ಜೂನ್‌ನಲ್ಲಿ ಬಂಧಿಸುವ ಪ್ರಶ್ನೆಯೇ ಇಲ್ಲ. 2022 ರ ಎಫ್‌ಐಆರ್ ಅನ್ನು ಏಪ್ರಿಲ್ 2023 ರಲ್ಲಿ ವಿಚಾರಣೆ ನಡೆಸಲಾಯಿತು ಮತ್ತು ಈಗ 2024 ರ ಜೂನ್‌ನಲ್ಲಿ ಬಂಧಿಸಲಾಗಿದೆ. ಏಜೆನ್ಸಿಗೆ ಕೆಲವು ಕಾರಣವಿರಬೇಕು ಅಥವಾ ಬಂಧನಕ್ಕೆ ಆಧಾರವಾಗಿ ಕೇಜ್ರಿವಾಲ್ ಅವರು ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದರು ಎಂದು ವಾದಿಸಿದರು.
ಈ ಕುರಿತು ನ್ಯಾಯಾಲಯವು ನೀವು ಬಂಧನವನ್ನು ರದ್ದುಪಡಿಸಲು ಮತ್ತು ಕಸ್ಟಡಿಯಿಂದ ಬಿಡುಗಡೆ ಮಾಡಲು ಒತ್ತಾಯಿಸುತ್ತಿದ್ದೀರಿ ಎಂದು ಕೇಳಿತು. ಇದಕ್ಕೆ ಸಿಂಘ್ವಿ ಅವರು ಸಕಾರಾತ್ಮಕವಾಗಿ ಉತ್ತರಿಸಿದಾಗ, ಕೇಜ್ರಿವಾಲ್ ಅವರು ಜಾಮೀನು ಅರ್ಜಿ ಸಲ್ಲಿಸಿದ್ದಾರೆಯೇ ಎಂದು ಕೋರ್ಟ್ ಕೇಳಿದೆ. ಈ ವೇಳೆ ಸಿಂಘ್ವಿ, ಈಗ ಅಲ್ಲ, ಆದರೆ ನಾವು ಸಲ್ಲಿಸಲು ಅರ್ಹರಾಗಿದ್ದೇವೆ. ನಾವು ಮುಂದೆ ಜಾಮೀನಿಗೆ ಅರ್ಜಿ ಸಲ್ಲಿಸಲಿದ್ದೇವೆ ಎಂದರು.
ಕೇಜ್ರಿವಾಲ್ ಅವರ ಅರ್ಜಿಯ ಮೇಲೆ ಕೋರ್ಟ್ ನೋಟಿಸ್ ಜಾರಿಗೊಳಿಸಿ ಸಿಬಿಐಗೆ ನಿರ್ದೇಶಿಸಿತು. ಪ್ರಕರಣದ ಮುಂದಿನ ವಿಚಾರಣೆ ಜುಲೈ 17 ರಂದು ನಡೆಯಲಿದೆ. ಜೂನ್ 29 ರಂದು, ಎಎಪಿ ಮುಖ್ಯಸ್ಥರನ್ನು ಸಿಟಿ ಕೋರ್ಟ್ 14 ದಿನಗಳವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು.