ನವದೆಹಲಿ: ಪತಂಜಲಿಯ (Patanjali) ಚವನ್‌ಪ್ರಾಶ್ ಉತ್ಪನ್ನದ ಕುರಿತಾಗಿ ಯಾವುದೇ ದಾರಿತಪ್ಪಿಸುವ ಜಾಹೀರಾತುಗಳನ್ನು ಪ್ರಸಾರ ಮಾಡದಂತೆ ದೆಹಲಿ ಹೈಕೋರ್ಟ್ ನಿರ್ಬಂಧ ವಿಧಿಸಿದೆ. ಪತಂಜಲಿ ವಿರುದ್ಧ ಡಾಬರ್ (Dabur) ಸಂಸ್ಥೆ ಸಲ್ಲಿಸಿದ್ದ ಮಾನಹಾನಿ ಪ್ರಕರಣ ವಿಚಾರಣೆ ನಡೆಸಿದ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ.
ಜಾಹೀರಾತಿನಲ್ಲಿ, ಪತಂಜಲಿ ಆಯುರ್ವೇದ ಗ್ರಂಥಗಳು ಮತ್ತು ಶಾಸ್ತ್ರೀಯ ಗ್ರಂಥಗಳ ಪ್ರಕಾರ ಚವನ್‌ಪ್ರಾಶ್ (Chyawanprash) ತಯಾರಿಸಿದ ಏಕೈಕ ಸಂಸ್ಥೆ ಎಂದು ಹೇಳಿಕೊಂಡಿದ್ದು, ಡಾಬರ್‌ನಂತಹ ಇತರ ಬ್ರ‍್ಯಾಂಡ್‌ಗಳಿಗೆ ಅಧಿಕೃತ ಜ್ಞಾನದ ಕೊರತೆಯಿದೆ ಎಂದು ಸೂಚಿಸುತ್ತದೆ. ಈ ಜಾಹೀರಾತುಗಳಿಗೆ ತಕ್ಷಣ ತಡೆಯಾಜ್ಞೆ ನೀಡುವಂತೆ ಕೋರಿ ಡಾಬರ್ ದೆಹಲಿ ಹೈಕೋರ್ಟ್ (Delhi High Court) ಮೊರೆ ಹೋಗಿ, ಬ್ರ‍್ಯಾಂಡ್‌ನ ಖ್ಯಾತಿಗೆ ಉಂಟಾದ ಹಾನಿಗೆ ಪರಿಹಾರವಾಗಿ 2 ಕೋಟಿ ರೂ.ಗಳನ್ನು ನೀಡುವಂತೆ ಕೋರಿತು. ಇದನ್ನೂ ಓದಿ: 2026ರ ಹಾಲಿವುಡ್ ವಾಕ್ ಆಫ್ ಫೇಮ್ ಗೌರವಕ್ಕೆ ಪಾತ್ರರಾದ ದೀಪಿಕಾ ಪಡುಕೋಣೆ
ಜಾಹೀರಾತುಗಳು ಗ್ರಾಹಕರನ್ನು ದಾರಿ ತಪ್ಪಿಸುತ್ತವೆ. ಕಟ್ಟುನಿಟ್ಟಾದ ನಿಯಂತ್ರಕ ಮಾನದಂಡಗಳಿಂದ ನಿಯಂತ್ರಿಸಲ್ಪಡುವ ಉತ್ಪನ್ನಗಳ ಮೇಲಿನ ವಿಶ್ವಾಸವನ್ನು ದುರ್ಬಲಗೊಳಿಸುತ್ತವೆ ಎಂದು ಡಾಬರ್ ತನ್ನ ಅರ್ಜಿಯಲ್ಲಿ ವಾದಿಸಿದೆ. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮಿನಿ ಪುಷ್ಕರ್ಣ ಅವರು ಮಧ್ಯಂತರ ಆದೇಶ ನೀಡಿದರು. ಮುಂದಿನ ವಿಚಾರಣೆಯು ಜುಲೈ 14ರಂದು ನಡೆಯಲಿದೆ. ಇದನ್ನೂ ಓದಿ: ಕೋವಿಶೀಲ್ಡ್ ಲಸಿಕೆ ಸುರಕ್ಷಿತವಾಗಿದೆ, ಹಠಾತ್ ಸಾವಿಗೆ ಸಂಬಂಧವಿಲ್ಲ: ಸೀರಮ್ ಇನ್‌ಸ್ಟಿಟ್ಯೂಟ್
ಈ ಹಿಂದೆಯೂ ಕೋವಿಡ್ ವ್ಯಾಕ್ಸಿನ್ ಜಾಹೀರಾತು ವಿಚಾರದಲ್ಲೂ ಪತಂಜಲಿ ಸುಪ್ರೀಂಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡಿತ್ತು. ಪತಂಜಲಿ ವ್ಯಾಕ್ಸಿನ್‌ನಿಂದ ಕೊರೊನಾ ಗುಣಮುಖವಾಗಲಿದೆ ಎಂದು ಹೇಳಿಕೊಂಡಿತ್ತು. ಇದರ ವಿರುದ್ಧ ಭಾರತೀಯ ವೈದ್ಯಕೀಯ ಸಂಘ(ಐಎಂಎ) ಅರ್ಜಿ ಸಲ್ಲಿಸಿತ್ತು. ಬಳಿಕ ಇಂತಹ ದಾರಿತಪ್ಪಿಸುವ ಜಾಹೀರಾತುಗಳು ಮತ್ತು ಇತರ ಭರವಸೆ ನೀಡುವುದನ್ನು ನಿಲ್ಲಿಸಲು ಬಾಬಾ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರಿಗೆ ಸೂಚಿಸಲಾಗಿತ್ತು. ಈ ಆದೇಶ ಪಾಲನೆ ಮಾಡದ ಹಿನ್ನೆಲೆ ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿತು. ಇದನ್ನೂ ಓದಿ: ಚಾಮುಂಡಿ ಬೆಟ್ಟದಲ್ಲಿ ವಸ್ತ್ರ ಸಂಹಿತೆ ಜಾರಿ ಆಗಲಿ: ಸಂಸದ ಯದುವೀರ್