ನವದೆಹಲಿ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ವಿಚಾರಣೆಯನ್ನು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಶುಕ್ರವಾರ ರಾತ್ರಿ ಅಂತ್ಯಗೊಳಿಸಿದ್ದು, ಶನಿವಾರ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.
ಇ.ಡಿ ಅಧಿಕಾರಿಗಳು ಡಿ.ಕೆ.ಶಿವಕುಮಾರ್ ಅವರನ್ನು ಶುಕ್ರವಾರ ಸಂಜೆ 6 ಗಂಟೆಯಿಂದ ವಿಚಾರಣೆಗೆ ಒಳಪಡಿಸಿದ್ದರು. ಸತತ 4 ಗಂಟೆ 45 ನಿಮಿಷ ವಿಚಾರಣೆ ನಡೆಸಿ ರಾತ್ರಿ ವಿಚಾರಣೆ ಅಂತ್ಯಗೊಳಿಸಿದ್ದಾರೆ. ಶುಕ್ರವಾರ ಡಿಕೆ ಶಿವಕುಮಾರ್ ಅವರು ಬಂಧನದ ಭೀತಿಯಿಂದ ಪಾರಾಗಿದ್ದು, ಇಂದು ಮತ್ತೆ ವಿಚಾರಣೆಗೆ ಹಾಜರಾಗಲಿದ್ದಾರೆ.
ಶುಕ್ರವಾರ ವಿಚಾರಣೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವರು, ವಿಚಾರಣೆ ಇಂದು ಶುರುವಾಗಿದೆ. ಸಂಜೆ 6ರಿಂದ ರಾತ್ರಿ 11:30 ವರೆಗೂ ವಿಚಾರಣೆ ನಡೆದಿದೆ. ಅಷ್ಟೇ ಅಲ್ಲದೆ ನಾಳೆ(ಶನಿವಾರ) ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದಾರೆ. ನಾನು ಕೂಡ ವಿಚಾರಣೆಗೆ ಸಹಕಾರ ನೀಡುತ್ತೇನೆ ಎಂದು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇನೆ ಎಂದು ಹೇಳಿದರು.
ಇನ್ನೂ ಎಷ್ಟು ದಿನ ವಿಚಾರಣೆ ನಡೆಯುತ್ತೆ ಎಂಬ ಮಾಧ್ಯಮಗಳ ಪ್ರಶ್ನೆ, ನೀವು ಅವರನ್ನೇ ಕೇಳಿ ಎಂದು ಗುಡುಗಿದರು. ಬಳಿಕ ಎಲ್ಲಿದೆ ಕಾರು ಎಂದು ಆಪ್ತರನ್ನು ಕೇಳಿ, ಕಾರು ಹತ್ತಿ ಇಡಿ ಕಚೇರಿಯಿಂದ ಹೊರ ನಡೆದರು. ಈ ವೇಳೆ ಸಂಸದ, ಸಹೋದರ ಡಿ.ಕೆ.ಸುರೇಶ್ ಹಾಗೂ ಮಾಜಿ ಸಂಸದ ಶಿವರಾಮೇಗೌಡ ಅವರು ಡಿ.ಕೆ.ಶಿವಕುಮಾರ್ ಅವರೊಂದಿಗೆ ಇದ್ದರು.