ನವದೆಹಲಿ: ಆದಾಯ ನಷ್ಟ ತಡೆಯಲು ಚಿಂತನೆ ನಡೆಸಿರುವ ದೆಹಲಿ ರಾಜ್ಯ ಸರ್ಕಾರ (Delhi Government) ಹೊಸ ಮದ್ಯ ನೀತಿಯನ್ನು ಜಾರಿಗೆ ತರಲು ಚಿಂತನೆ ನಡೆದಿದೆ. ಅದರ ಪ್ರಕಾರ, ಬಿಯರ್ (Beer) ಕುಡಿಯುವ ಕಾನೂನು ಬದ್ಧ ವಯಸ್ಸನ್ನು 25 ರಿಂದ 21 ವರ್ಷಕ್ಕೆ ಇಳಿಸಲು ಪ್ಲ್ಯಾನ್ ಮಾಡಿದೆ.
ಮೂಲಗಳ ಪ್ರಕಾರ, ಇತ್ತೀಚೆಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ದೆಹಲಿ ಸರ್ಕಾರ ಈ ಬಗ್ಗೆ ಚರ್ಚಿಸಿದೆ. ದೆಹಲಿ ಸುತ್ತಮುತ್ತಲಿನ ಪ್ರದೇಶಗಳಾದ ನೋಯ್ಡಾ, ಗುರುಗ್ರಾಮ್, ಗಾಜಿಯಾಬಾದ್ ಮತ್ತು ಫರಿದಾಬಾದ್‌ಗಳಲ್ಲಿ ಈಗಾಗಲೇ ಬಿಯರ್ ಕುಡಿಯುವ ಕಾನೂನುಬದ್ಧ ವಯೋಮಿತಿಯನ್ನ 21 ವರ್ಷಕ್ಕೆ ಇಳಿಸಲಾಗಿದೆ. ದೆಹಲಿಯಲ್ಲೂ ವಯೋಮಿತಿ ಕಡಿಮೆ ಮಾಡುವುದರಿಂದ ಅಕ್ರಮ ಮದ್ಯ ಮಾರಾಟ ತಪ್ಪುತ್ತದೆ. ಜೊತೆಗೆ ಬ್ಲ್ಯಾಕ್ ಮಾರ್ಕೆಟ್ ಅನ್ನೂ ನಿಯಂತ್ರಿಸಬಹುದು ಎಂದು ಅಧಿಕಾರಿಗಳು ಸರ್ಕಾರಕ್ಕೆ ತಿಳಿಸಿದ್ದಾರೆ.
ಇದಲ್ಲದೇ ರಾಷ್ಟ್ರ ರಾಜಧಾನಿಯಲ್ಲಿ ಮದ್ಯದ ಅಂಗಡಿಗಳನ್ನ ನಡೆಸಲು ಹೈಬ್ರಿಡ್ ಮಾದರಿ ಅನುಸರಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ಅಂದ್ರೆ, ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಮಾರಾಟ ನಡೆಯಬೇಕು. ಪ್ರಸ್ತುತ, ದೆಹಲಿಯಲ್ಲಿ ಕೇವಲ 4 ಸರ್ಕಾರಿ ನಿಗಮಗಳು ಮಾತ್ರ ಮದ್ಯದ ಅಂಗಡಿಗಳನ್ನು ನಡೆಸುತ್ತಿವೆ. ಹೀಗಾಗಿ ಸರ್ಕಾರಿ ಮಾರಾಟಗಾರರ ಜೊತೆಗೆ ಖಾಸಗಿ ಸಹಭಾಗಿತ್ವ ತೊಡಗಿಸಿಕೊಳ್ಳುವ ಬಗ್ಗೆಯೂ ಚಿಂತನೆ ನಡೆದಿದೆ.
ಆದಾಯ ನಷ್ಟ ತಡೆಯಲು ಪ್ಲ್ಯಾನ್
ಮೂಲಗಳ ಪ್ರಕಾರ, ಹೊಸ ಅಬಕಾರಿ ನೀತಿಯ ಕರಡನ್ನು ಸಿದ್ಧಪಡಿಸಲಾಗುತ್ತಿದೆ. ಅದರಲ್ಲಿ ಹಲವು ಪ್ರಮುಖ ಬದಲಾವಣೆಗಳನ್ನು ಪರಿಗಣಿಸಲಾಗುತ್ತಿದೆ. ನೆರೆಯ ರಾಜ್ಯಗಳ ಮದ್ಯದ ಬೆಲೆಗಳಲ್ಲಿನ ವ್ಯತ್ಯಾಸದಿಂದಾಗಿ ದೆಹಲಿ ನಷ್ಟ ಅನುಭವಿಸದಂತೆ ನೋಡಿಕೊಳ್ಳುವುದು ಹೊಸ ನೀತಿಯ ಗುರಿಯಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪ್ರೀಮಿಯಂ ಬ್ರಾಂಡ್‌ಗಳ ಲಭ್ಯತೆ
ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರೀಮಿಯಂ ಬ್ರ್ಯಾಂಡ್‌ಗಳು ದೆಹಲಿಯಲ್ಲಿ ಸುಲಭವಾಗಿ ಲಭ್ಯವಾಗುವಂತೆ ನೋಡಿಕೊಳ್ಳುವುದನ್ನು ಸಮಿತಿ ಪರಿಶೀಲಿಸುತ್ತಿದೆ. ಪ್ರಸ್ತುತ, ಅವುಗಳ ಕೊರತೆಯಿಂದಾಗಿ, ಗ್ರಾಹಕರು ಹರಿಯಾಣ ಮತ್ತು ಯುಪಿಯತ್ತ ಮುಖ ಮಾಡುತ್ತಾರೆ, ಇದರಿಂದಾಗಿ ದೆಹಲಿಗೆ ಆದಾಯ ನಷ್ಟವಾಗುತ್ತಿದೆ ಎಂದು ತಿಳಿದುಬಂದಿದೆ. ಇದರೊಂದಿಗೆ ಜನನಿಬಿಡ ವಸತಿ ಪ್ರದೇಶಗಳಲ್ಲಿ ಮದ್ಯದ ಅಂಗಡಿಗಳ ಸಂಖ್ಯೆಯನ್ನು ಕಡಿಮೆ ಮಾಡಲು ಅಬಕಾರಿ ಇಲಾಖೆಗೆ ಸೂಚನೆ ನೀಡಿದೆ.