ನವದೆಹಲಿ: ಇಬ್ಬರು ಬಾಲಕರನ್ನು ಹತ್ತು ಮಂದಿಯ ಗುಂಪೊಂದು ಬಲವಂತವಾಗಿ ಪರಸ್ಪರ ಲೈಂಗಿಕ ಕ್ರಿಯೆ ಮಾಡುವಂತೆ ಒತ್ತಾಯಿಸಿ ಚಿತ್ರಹಿಂಸೆ ನೀಡಿದ್ದಾರೆ. ಅಷ್ಟೇ ಅಲ್ಲದೇ ಅದನ್ನು ವಿಡಿಯೋ ಮಾಡಿರುವಂತಹ ಅಮಾನೀಯವಾದ ಘಟನೆ ಪಶ್ಚಿಮ ದೆಹಲಿಯಲ್ಲಿ ನಡೆದಿದ್ದು, ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಆರೋಪಿಗಳಿಬ್ಬರನ್ನು ಬಂಧಿಸಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.
ಹತ್ತು ಆರೋಪಿಗಳ ವಿರುದ್ಧ ಪೋಸ್ಕೋ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ. ಪ್ರಕರಣಕ್ಕೆ ಸಂಬಂಧಿಸಿದ ಇಬ್ಬರು ಆರೋಪಿಗಳನ್ನು ಶನಿವಾರ ರಾತ್ರಿ ಬಂಧಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿ ದೀಪೇಂದ್ರ ಪಾಥಕ್ ತಿಳಿಸಿದ್ದಾರೆ.
ಅಕ್ಟೋಬರ್ 26 ರೋಹಿಣಿ ನಗರದಲ್ಲಿ ಈ ಪ್ರಕರಣ ನಡೆದಿದ್ದು, ಆರೋಪಿಗಳು ಮಾಡಿದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದು, ಅದು ವೈರಲ್ ಆದ ನಂತರ ಈ ವಿಚಾರ ತಿಳಿದು ಸಂತ್ರಸ್ತ ಬಾಲಕರ ಕುಟುಂಬದವರು ಶನಿವಾರ ಪೊಲೀಸರಿಗೆ ದೂರು ನೀಡಿದ್ದಾರೆ. 13 ಮತ್ತು 15 ನಡುವಿನ ವಯಸ್ಸಿನ ಹುಡುಗರಾಗಿದ್ದು, ಇಬ್ಬರು ಸ್ನೇಹಿತರಾಗಿದ್ದಾರೆ. ಹೋಲಂಬಿ ಕಲನದಲ್ಲಿರುವ ಮೆಟ್ರೋ ವಿಹಾರ್ ಪ್ರದೇಶದಲ್ಲಿ ಕುಟುಂಬದ ಜೊತೆ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಏನಿದು ಪ್ರಕರಣ?
ಆರೋಪಿಯಲ್ಲಿ ಒಬ್ಬನಾದ ಕನ್ವಾರ್ ಸಿಂಗ್ ಮನೆಯಲ್ಲಿ ಕಳ್ಳತನವಾಗಿದ್ದು, ಅದರಲ್ಲಿ ಈ ಹುಡುಗರು ಭಾಗಿಯಾಗಿದ್ದಾರೆ ಎಂದು ಅನುಮಾನಿಸಿದ್ದಾನೆ. ನಂತರ ಬಾಲಕರನ್ನು ತನ್ನ ಮನೆಗೆ ಕರೆಸಿ ಚರ್ಮದ ಬೆಲ್ಟ್ ನಲ್ಲಿ ಹೊಡೆದಿದ್ದಾನೆ. ಬಾಲಕರು ನಾವು ಕಳ್ಳತನ ಮಾಡಿಲ್ಲ ಎಂದು ಹೇಳಿದ್ದಾರೆ. ಕೋಪಗೊಂಡ ಸಿಂಗ್ ತನ್ನ 15 ಜನ ಸ್ನೇಹಿತರನ್ನು ಕರೆಸಿ ನಿರಂತರವಾಗಿ 5 ಗಂಟೆಗಳ ಕಾಲ ಚಿತ್ರಹಿಂಸೆ ನೀಡಿದ್ದಾನೆ.
ಇಬ್ಬರು ಬಾಲಕರ ಬಟ್ಟೆಯನ್ನು ಬಿಚ್ಚಿಸಿ ಪರಸ್ಪರ ಲೈಂಗಿಕ ಕ್ರಿಯೆ ಮಾಡುವಂತೆ ಒತ್ತಾಯಿಸಿದ್ದು, ಅದನ್ನು ವಿಡಿಯೋ ಮಾಡಿದ್ದಾರೆ. ಅಷ್ಟೇ ಅಲ್ಲದೇ ಬಾಲಕರ ಖಾಸಗಿ ಭಾಗಗಳಿಗೆ ಪೆಟ್ರೋಲ್, ಖಾರದ ಪುಡಿ ಹಾಕಿ, ಸಿಗರೇಟಿನಿಂದ ಸುಟ್ಟು ಚಿತ್ರಹಿಂಸೆ ನೀಡಿದ್ದಾರೆ. ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ರೆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡುವುದಾಗಿ ಬೆದರಿಸಿದ್ದಾರೆ. ಆದರೆ ಆರೋಪಿಗಳು ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ. ನಂತರ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಸದ್ಯಕ್ಕೆ ಇಬ್ಬರು ಬಾಲಕರ ಸ್ಥಿತಿ ತೀವ್ರ ಗಂಭೀರವಾಗಿದ್ದು, ರೋಹಿಣಿಯ ಅಂಬೇಡ್ಕರ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.