ಕಾಮಗಾರಿ ವಿಳಂಬ: ಬಾಗಲಕೋಟೆ ನಗರದ ವ್ಯಾಪಾರಸ್ಥರು ಆಕ್ರೋಶ

Public TV
1 Min Read
Delay in Road Development Works Bagalkote Businessmen lodged complaint against contractors 2

ಬಾಗಲಕೋಟೆ: ನಗರದ ವಿದ್ಯಾಗಿರಿಯ 19ನೇ ಕ್ರಾಸ್ ನಲ್ಲಿ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿ (Road Development Works) ಅತೀ ಮಂದಗತಿಯಲ್ಲಿ ಸಾಗುತ್ತಿರುವುದಕ್ಕೆ ನಗರದ ವ್ಯಾಪಾರಸ್ಥರು ಆಕ್ರೋಶ ವ್ಯಕ್ತಪಡಿಸಿ ಬಾಗಲಕೋಟೆ (Bagalkote) ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ನೀಡಿದ್ದಾರೆ.

ಬಾಗಲಕೋಟೆಯ ವಿದ್ಯಾಗಿರಿಯ 19ನೇ ಕ್ರಾಸ್‌ನಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿ ಸುಮಾರು ಐದು ತಿಂಗಳಿನಿಂದ ಮಂದಗತಿಯಲ್ಲಿ ನಡೆಯುತ್ತಿದೆ. ಅಂದಾಜು 1 ಕಿಲೋ ಮೀಟರ್ ಅಂತರದ ಈ ರಸ್ತೆ ನಿರ್ಮಾಣ ಕಾಮಗಾರಿ ಸುಮಾರು ಐದು ತಿಂಗಳಾದರೂ ಪೂರ್ಣಗೊಂಡಿಲ್ಲ. ಇದರಿಂದ ನಮ್ಮ ವ್ಯಾಪಾರ ವಹಿವಾಟಿಗೆ ಸಮಸ್ಯೆಯಾಗುತ್ತಿದೆ ಎಂದು ವ್ಯಾಪಾರಸ್ಥರು ಗುತ್ತಿಗೆದಾರರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

Delay in Road Development Works Bagalkote Businessmen lodged complaint against contractors 1

ನಿತ್ಯ ನಾವು ವ್ಯಾಪಾರ- ವಹಿವಾಟನ್ನೇ ಅವಲಂಬಿಸಿ ಬದುಕು ಸಾಗಿಸುತ್ತಿದ್ದೇವೆ. ಸದ್ಯ ರಸ್ತೆ ಕಾಮಗಾರಿಯಿಂದ ಅಂಗಡಿಗಳು ಬಂದ್ ಆಗಿ ವ್ಯಾಪಾರವಿಲ್ಲದೇ ನಮ್ಮ ಬದುಕು ದುಸ್ತರವಾಗಿದೆ. ನಾವೆಂದೂ ಅಭಿವೃದ್ಧಿಗೆ ಅಡ್ಡಿಪಡಿಸಿಲ್ಲ. ಸಾರ್ವಜನಿಕರ ಉದ್ದೇಶಕ್ಕಾಗಿ ನಡೆಯುವ ಅಭಿವೃದ್ದಿ ಕಾಮಗಾರಿಗೆ ಸಹಕರಿಸಬೇಕೆಂಬ ಕಾರಣಕ್ಕಾಗಿಯೇ ಕಳೆದ ಐದಾರು ತಿಂಗಳಿನಿಂದ ಸಹಕರಿಸುತ್ತಾ ಬಂದಿದ್ದೇವೆ. ಆದರೆ ಈಗ ರಸ್ತೆ ಮಾಡುವುದಕ್ಕಾಗಿ ಕಳೆದ 20 ದಿನಗಳಿಂದ ರಸ್ತೆಯನ್ನು ಬಂದ್ ಮಾಡಿದ್ದರಿಂದ ನಮ್ಮ ವ್ಯಾಪಾರ- ವಹಿವಾಟು ಸಂಪೂರ್ಣ ಸ್ಥಗಿತವಾಗಿದೆ ಎಂದು ದೂರಿದ್ದಾರೆ. ಇದನ್ನೂ ಓದಿ: ಹೈದರಾಬಾದ್ ಬಿರಿಯಾನಿಯಿಂದಾಗಿ ಸ್ವಲ್ಪ ಸ್ಲೋ – ಅಭ್ಯಾಸ ಪಂದ್ಯದ ಸೋಲಿಗೆ ಪಾಕ್ ಆಟಗಾರನ ಪ್ರತಿಕ್ರಿಯೆ

ಪ್ರಮುಖ ರಸ್ತೆಯನ್ನು ಬಂದ್ ಮಾಡಿ ಕೆಲಸ ಮಾಡುವಾಗ ವೇಗದಲ್ಲಿ ಕಾಮಗಾರಿ ಮುಂದುವರಿಯಲಿ ಎಂದು ನಾವು ಭಾವಿಸಿದ್ದೆವು. ಆದರೆ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವುದರಿಂದ ಇತ್ತೀಚಿಗಿನ ಗಣೇಶ ಚತುರ್ಥಿಯ ವ್ಯಾಪಾರವನ್ನು ಈ ಕಾಮಗಾರಿ ಈಗಾಗಲೇ ನುಂಗಿ ಹಾಕಿದೆ. ಈಗಲೂ ಕಾಮಗಾರಿ ವಿಳಂಬವಾದರೆ ಮುಂಬರುವ ಸಾಲು, ಸಾಲು ಹಬ್ಬಗಳಿಗೂ ನಮಗೆ ವ್ಯಾಪಾರ ಇಲ್ಲದಂತಾಗುತ್ತದೆ. ಅದಕ್ಕಾಗಿ ಕಾಮಗಾರಿಗೆ ವೇಗ ನೀಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಬೇಕು ಎಂದು ಜಿಲ್ಲಾಧಿಕಾರಿ ಕೆ. ಜಾನಕಿಯವರಿಗೆ ನಗರದ ವ್ಯಾಪಾರಸ್ಥರು ಮನವಿ ಮಾಡಿದರು.

Web Stories

Share This Article