ಜುಲೈ 11ರಿಂದ ಪದವಿ ಕಾಲೇಜು ದಾಖಲಾತಿ- ಆನ್‍ಲೈನ್ ನಲ್ಲಿ ಅರ್ಜಿ ಸಲ್ಲಿಕೆ: ಅಶ್ವಥ್ ನಾರಾಯಣ

Advertisements

ಬೆಂಗಳೂರು: ಪದವಿ ಕಾಲೇಜುಗಳಿಗೆ ಜುಲೈ 11ರಿಂದ 2022-23ನೇ ಸಾಲಿನ ಪ್ರವೇಶ ಪ್ರಕ್ರಿಯೆ ಆರಂಭವಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ತಿಳಿಸಿದ್ದಾರೆ.

Advertisements

ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇದೇ ಮೊದಲ ಬಾರಿಗೆ ಏಕೀಕೃತ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ ಮೂಲಕ ಪ್ರವೇಶ ಪ್ರಕ್ರಿಯೆ ನಡೆಸಲಾಗುತ್ತದೆ. ಎಲ್ಲವೂ ಆನ್ ಲೈನ್ ನಲ್ಲಿ ನಡೆಯಲಿದೆ. ವಿದ್ಯಾರ್ಥಿಗಳು ಸಿಂಗಲ್ ಲಾಗಿನ್ ನಿಂದಲೇ ಯಾವ ಕಾಲೇಜಿಗೆ ಬೇಕಾದರೂ ಅರ್ಜಿ ಹಾಕಬಹುದು ಎಂದು ಮಾಹಿತಿ ನೀಡಿದರು.

Advertisements

ಅರ್ಜಿ ಹಾಕಲು ಬೇರೆ ಬೇರೆ ಸಂಸ್ಥೆಗಳಿಗೆ ಓಡಾಡುವ ಅಗತ್ಯ ಇಲ್ಲ. ಪಿಯುಸಿ ನಂಬರ್ ಹಾಕಿದರೆ ಆಂಕಪಟ್ಟಿಗೆ ಸಂಬಂಧಿಸಿದ ಮಾಹಿತಿ ಸಿಗಲಿದೆ. ಉಳಿದಂತೆ, ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ ಇತ್ಯಾದಿಗಳು ಕೂಡ ಆಧಾರ್ ದೃಢೀಕರಣದಿಂದ ಸಿಗಲಿವೆ ಎಂದು ಸಚಿವರು ವಿವರಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿ ವಿಚಾರದಲ್ಲಿ ಎರಡನೇ ವರ್ಷಕ್ಕೆ ಬೇಕಾದ ಪಠ್ಯಕ್ರಮದ ಬಗ್ಗೆ ಇತ್ತೀಚೆಗೆ ಕುಲಪತಿಗಳ ಸಭೆ ನಡೆಸಲಾಗಿದೆ. ಹಾಗೆಯೇ ಮೊದಲನೇ ವರ್ಷದಲ್ಲಿ ಎನ್ ಇ ಪಿ 2020 ಅನುಷ್ಠಾನವನ್ನು ಪರಿಣಾಮಕಾರಿಯಾಗಿಸುವ ಬಗ್ಗೆಯೂ ಸಮಾಲೋಚನೆ ನಡೆಸಲಾಗಿದೆ ಎಂದರು.

Advertisements

ರಾಜ್ಯದ 440 ಸರ್ಕಾರಿ ಪ್ರಥಮ ದರ್ಜೆ ಕಾಲೇಜು, 100 ಸರ್ಕಾರಿ ಪಾಲಿಟೆಕ್ನಿಕ್ ಹಾಗೂ 14 ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸಂಗ್ರಹವಾಗುವ ಶುಲ್ಕವನ್ನು ಇನ್ನು ಮುಂದೆ ಕಾಲೇಜುಗಳಲ್ಲೇ ಬಳಸಲು ಅವಕಾಶ ನೀಡಲಾಗಿದೆ. ಸ್ವಾತಂತ್ರ್ಯ ಬಂದ ಮೇಲೆ ಇದೇ ಮೊದಲು ಈ ರೀತಿಯ ತೀರ್ಮಾನ ಮಾಡಲಾಗಿದೆ. ವರ್ಷಕ್ಕೆ ಕನಿಷ್ಠ 50 ಕೋಟಿ ರೂಪಾಯಿ ಹಣ ಕಾಲೇಜುಗಳಲ್ಲೇ ಉಳಿಯಲಿದ್ದು ಅದರಿಂದ ಕಾಲೇಜುಗಳಲ್ಲಿನ ಸಣ್ಣಪುಟ್ಟ ಖರ್ಚುಗಳಿಗೆ ಅನುಕೂಲ ಆಗಲಿದೆ ಎಂದು ತಿಳಿಸಿದರು.

ಈಗ ವಿ.ವಿ.ಗಳ ಮೂಲಕ ಸರ್ಕಾರಕ್ಕೆ ಭೌತಿಕ ಕಡತ ಸಲ್ಲಿಸಲು ಅವಕಾಶ ನಿರಾಕರಿಸಲಾಗಿದೆ. ಎಲ್ಲಾ ಕಡತಗಳು ಇ-ಆಫೀಸ್ ಮೂಲಕವೇ ಬರುತ್ತಿದ್ದು, 32,000 ಇ- ಕಡತಗಳು ಸೃಜನೆಗೊಂಡಿವೆ. ಜೊತೆಗೆ 11 ಲಕ್ಷ ವಿದ್ಯಾರ್ಥಿಗಳಿಗೆ 1600 ಕೋಟಿ ರೂಪಾಯಿಗಳನ್ನು ಪೋರ್ಟಲ್ ಮೂಲಕ ಅವರವರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗಿದೆ. ಎಲ್ಲಾ ವಿ.ವಿ.ಗಳಲ್ಲೂ ಎಚ್.ಆರ್.ಎಂ.ಎಸ್. ಪ್ಲ್ಯಾಟ್ ಫಾರ್ಮ್ ಮೂಲಕವೇ ವೇತನ ಪಾವತಿ ಆಗುತ್ತಿದೆ ಎಂದು ಹೇಳಿದರು.

ಐಐಎಂ ಮಾದರಿಯಲ್ಲಿ ರಾಜ್ಯದ ವಿಶ್ವವಿದ್ಯಾಲಯಗಳನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಡಾ.ವಾಸುದೇವ ಅತ್ರೆ ಸಮಿತಿ ವರದಿ ಕೊಟ್ಟಿದೆ. ಇದರ ಪ್ರಕಾರ ಹೊಸ ಕಾಯ್ದೆ ರಚಿಸಲು ಉದ್ದೇಶಿಸಿದ್ದು ಅದನ್ನು ಸಾರ್ವಜನಿಕರ ಅವಗಹನೆಗೆ ಉನ್ನತ ಶಿಕ್ಷಣ ಇಲಾಖೆ ವೆಬ್ ಸೈಟ್ ನಲ್ಲಿ ಹಾಕಲಾಗಿದೆ. ಸಾರ್ವಜನಿಕರು ಹೊಸ ಕಾಯ್ದೆ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸಬಹುದು ಎಂದರು.

Live Tv

Advertisements
Exit mobile version