ಮೋದಿ ವಿದ್ಯಾರ್ಹತೆ ಪ್ರಶ್ನಿಸಿದ್ದ ಕೇಜ್ರಿವಾಲ್‌ಗೆ 25 ಸಾವಿರ ದಂಡ

Public TV
1 Min Read
Arvind Kejriwal 3

ಅಹಮದಾಬಾದ್‌: ಪ್ರಧಾನಿ ನರೇಂದ್ರ ಮೋದಿ (PM Narendra Modi) ವಿದ್ಯಾರ್ಹತೆ ಪ್ರಶ್ನಿಸಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‍ಗೆ (Delhi CM Arvind Kejriwal) ಮುಖಭಂಗ ಉಂಟಾಗಿದೆ. ಪ್ರಧಾನಿ ಮೋದಿ ಡಿಗ್ರಿ ಸರ್ಟಿಫಿಕೇಟ್‍ಗಳನ್ನು ಪ್ರದರ್ಶಿಸುವ ಅಗತ್ಯವಿಲ್ಲ ಎಂದು ಗುಜರಾತ್ ಹೈಕೋರ್ಟ್ (Gujarat High Court) ಮಹತ್ವದ ತೀರ್ಪು ನೀಡಿ ಕೇಜ್ರಿವಾಲ್‍ಗೆ 25 ಸಾವಿರ ರೂ. ದಂಡವನ್ನೂ (Fine) ವಿಧಿಸಿದೆ.

ಮೋದಿ ಅವರ ಪದವಿ ಮಾಹಿತಿಯನ್ನು ಅರವಿಂದ್ ಕೇಜ್ರಿವಾಲ್ ಅವರಿಗೆ ನೀಡುವಂತೆ ಕೇಂದ್ರ ಮಾಹಿತಿ ಆಯೋಗ (CIC) ಏಳು ವರ್ಷಗಳ ಹಿಂದಿನ ಆದೇಶವನ್ನು ಕೋರ್ಟ್‌ ರದ್ದುಗೊಳಿಸಿದೆ.

ಸಿಐಸಿ ಆದೇಶದ ವಿರುದ್ಧ ಗುಜರಾತ್ ವಿಶ್ವವಿದ್ಯಾಲಯದ ಮೇಲ್ಮನವಿಗೆ ಅನುಮತಿ ನೀಡಿದ ನ್ಯಾಯಮೂರ್ತಿ ಬಿರೇನ್ ವೈಷ್ಣವ್ ಅವರು ಕೇಜ್ರಿವಾಲ್ ಅವರಿಗೆ 25 ಸಾವಿರ ದಂಡ ವಿಧಿಸಿ 4 ವಾರಗಳಲ್ಲಿ ಮೊತ್ತವನ್ನು ಗುಜರಾತ್ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ (ಜಿಎಸ್ಎಲ್ಎಸ್ಎ) ಪಾವತಿಸುವಂತೆ ಸೂಚಿಸಿದ್ದಾರೆ.  ಇದನ್ನೂ ಓದಿ: Mood Of Karnataka – `ಪಬ್ಲಿಕ್’ ಸರ್ವೆಯಲ್ಲಿ ಕರ್ನಾಟಕ ಕುರುಕ್ಷೇತ್ರ ಅತಂತ್ರ

pm narendra modi mandya road show expressway 2

ಏನಿದು ಪ್ರಕರಣ?
2016ರ ಏಪ್ರಿಲ್‌ನಲ್ಲಿ ಕೇಜ್ರಿವಾಲ್ ಅವರು ಸಿಐಸಿಯ ಎಂ ಶ್ರೀಧರ್ ಆಚಾರ್ಯುಲು ಅವರಿಗೆ ಪತ್ರ ಬರೆದು ಆಯೋಗವು ಮೋದಿ ಅವರ ಶೈಕ್ಷಣಿಕ ಅರ್ಹತೆಗಳ ಕುರಿತು ಮಾಹಿತಿಯನ್ನು ಮರೆಮಾಚಲು ಏಕೆ ಬಯಸಿದೆ ಎಂದು ಪ್ರಶ್ನಿಸಿದ್ದರು. ಈ ಪತ್ರದ ಆಧಾರ ಹಿನ್ನೆಲೆಯಲ್ಲಿ ಆಚಾರ್ಯುಲು ಅವರು ಮೋದಿ ಅವರ ಶೈಕ್ಷಣಿಕ ಅರ್ಹತೆಯ ದಾಖಲೆಗಳನ್ನು ಕೇಜ್ರಿವಾಲ್ ಅವರಿಗೆ ನೀಡುವಂತೆ ಗುಜರಾತ್ ವಿಶ್ವವಿದ್ಯಾಲಯ ಮತ್ತು ದೆಹಲಿ ವಿಶ್ವವಿದ್ಯಾಲಯಕ್ಕೆ ನಿರ್ದೇಶನ ನೀಡಿದ್ದರು.

ಮೂರು ತಿಂಗಳ ನಂತರ ವಿಶ್ವವಿದ್ಯಾಲಯ ಮೇಲ್ಮನವಿ ಸಲ್ಲಿಸಿದ ಬಳಿಕ ಗುಜರಾತ್ ಹೈಕೋರ್ಟ್ ಸಿಐಸಿಯ ಆದೇಶವನ್ನು ತಡೆಹಿಡಿದಿತ್ತು.

ಫೆಬ್ರವರಿಯಲ್ಲಿ ನಡೆದ ಕೊನೆ ವಿಚಾರಣೆಗೆ ವಿಶ್ವವಿದ್ಯಾಲಯ ಪರವಾಗಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಪ್ರಧಾನಿ ಅವರ ಪದವಿಗಳ ಬಗ್ಗೆ ಮಾಹಿತಿಯು ಈಗಾಗಲೇ ಸಾರ್ವಜನಿಕವಾಗಿ ಲಭ್ಯವಿದೆ. ಈ ವಿಚಾರದಲ್ಲಿ ಮುಚ್ಚಿಡಲು ಏನೂ ಇಲ್ಲ ಎಂದು ವಾದಿಸಿದ್ದರು.

Share This Article