ಕೊಪ್ಪಳ: ವಿಲಕ್ಷಣ ಹೆಣ್ಣು ಮಗು ಜನನವಾಗಿ ಜನರಲ್ಲಿ ಅಚ್ಚರಿ ಮೂಡಿಸಿದ ಘಟನೆ ಕೊಪ್ಪಳದ ಮುದೇನೂರಿನಲ್ಲಿ ನಡೆದಿದೆ.
ಮುದೇನೂರು ಸರ್ಕಾರಿ ಪ್ರಾಥಮಿಕ ಆಸ್ಪತ್ರೆಯಲ್ಲಿ ಜನಿಸಿದ ವಿಚಿತ್ರ ಮಗು ಕೆಲಕಾಲ ಸಾರ್ವಜನಿಕರ ಅಚ್ಚರಿಗೆ ಕಾರಣವಾಗಿತ್ತು. ಮಗುವನ್ನು ನೋಡಲು ಜನ ತಂಡೋಪತಂಡವಾಗಿ ಆಗಮಿಸಿದ್ರು. ಕುಷ್ಟಗಿ ತಾಲೂಕಿನ ಜುಮುಲಾಪುರ ಗ್ರಾಮದ ಬೀರಲಿಂಗಪ್ಪ ಬಳೂಟಗಿಯ ಪತ್ನಿ ಅನಸೂಯಮ್ಮ ಅವರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆರಿಗೆಯಾಗಿತ್ತು. ಇದು ಇವರಿಗೆ ಮೊದಲ ಹೆರಿಗೆಯಾಗಿದ್ದು ವಿಲಕ್ಷಣ ಮಗು ಹುಟ್ಟಿದೆ.
ಎರಡು ಕೆಜಿ ತೂಕದ ಹೆಣ್ಣು ಮಗುವಿನ ಕಿವಿ, ಮೂಗು, ಬಾಯಿ, ಕಣ್ಣು ಬೇರೆ ಬೇರೆ ಜಾಗದಲ್ಲಿ ಅಸಹಜವಾಗಿ ಇದ್ದು, ಜನರ ಅಚ್ಚರಿಗೆ ಕಾರಣವಾಗಿತ್ತು. ಅಲ್ಲದೆ ಶಿಶುವಿನ ತಲೆಯಲ್ಲಿ ನೀರು ತುಂಬಿ ದೊಡ್ಡ ಗಾತ್ರದಲ್ಲಿತ್ತು. ಹೆರಿಗೆ ಬಳಿಕ ಮಗುವಿನ ತಲೆ ಒಡೆದು ನೀರು ಹೊರಕ್ಕೆ ಬಂದು ಶಿಶು ಮೃತಪಟ್ಟಿದೆ. ತಾಯಿ ಆರೋಗ್ಯವಾಗಿದ್ದು ಯಾವುದೇ ತೊಂದರೆ ಇಲ್ಲ ಅಂತ ಆಸ್ಪತ್ರೆ ವೈದ್ಯರಾದ ಡಾ. ನೀಲಪ್ಪ ತಿಳಿಸಿದ್ದಾರೆ.