ಉಡುಪಿ: ಉಡುಪಿ- ಚಿಕ್ಕಮಗಳೂರು ಲೋಕಸಭಾ ಅಭ್ಯರ್ಥಿ ಶೋಭಾ ಕರಂದ್ಲಾಜೆ ಇಂದು ನಾಮಪತ್ರ ಸಲ್ಲಿಸಲಿದ್ದು, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸಾಥ್ ನೀಡಿದ್ದಾರೆ. ಬೆಳಗ್ಗೆ 9 ಗಂಟೆಗೆ ಕೃಷ್ಣ ಮಠಕ್ಕೆ ನಿರ್ಮಲಾ ಸೀತಾರಾಮನ್, ಶೋಭಾ ಕರಂದ್ಲಾಜೆ, ಶಾಸಕ ರಘುಪತಿ ಭಟ್ ಮತ್ತಿತರರ ಜೊತೆ ಭೇಟಿ ನೀಡಿದ್ದಾರೆ.
ಕನಕ ನವಗ್ರಹ ಕಿಂಡಿಯ ಮೂಲಕ ಸಚಿವೆ ಕೃಷ್ಣದರ್ಶನ ಮಾಡಿದರು. ಪರ್ಯಾಯ ಪಲಿಮಾರು ಸ್ವಾಮೀಜಿ ಸಚಿವರಿಗೆ ಕೃಷ್ಣ ಪ್ರಸಾದ, ಸೀರೆ ನೀಡಿ ಗೌರವಿಸಿದರು. ಇದೇ ಸಂದರ್ಭ ರಕ್ಷಣಾ ಸಚಿವೆ ಭಕ್ತರೊಬ್ಬರ ಜೊತೆ ಸೌಜನ್ಯತೆ ಮೆರೆದ ಘಟನೆ ನಡೆದಿದೆ. ಕನಕನ ಕಿಂಡಿಯ ಮೂಲಕ ಕೃಷ್ಣ ದರ್ಶನಕ್ಕೆ ತರಳಿದ್ದ ನಿರ್ಮಲ ಸೀತಾರಾಮನ್ ಮುಂಭಾಗ ಭಕ್ತರೊಬ್ಬರು ಕೃಷ್ಣ ದರ್ಶನ ಮಾಡುತ್ತಿದ್ದರು. ಈ ವೇಳೆ ಪೊಲೀಸರು ಆ ಭಕ್ತರೊಬ್ಬರನ್ನು ಬದಿಗೆ ಕಳುಹಿಸಲು ಮುಂದಾದರು.
ಈ ಸಂದರ್ಭ ಪೊಲೀಸರನ್ನು ರಕ್ಷಣಾ ಸಚಿವೆ ತಡೆದಿದ್ದಾರೆ. ಭಕ್ತನಿಗೆ ಅಡ್ಡಿಪಡಿಸದಂತೆ ಪೊಲೀಸರಿಗೆ ಸೂಚಿಸಿದ್ದಾರೆ. ಎಲ್ಲರಂತೆ ಸರದಿಯಲ್ಲಿ ನಿಂತು ದರ್ಶನ ಕೈಗೊಂಡ ನಿರ್ಮಲಾ ಸೀತಾರಾಮನ್ ನಡೆ ಭಕ್ತರಿಗೆ ಮೆಚ್ಚುಗೆಯಾಗಿದೆ. ನಂತರ ಉಡುಪಿ ಕೃಷ್ಣ ಮಠದ ಕನಕನ ಕಿಂಡಿಯಲ್ಲಿ ಕೃಷ್ಣ ದರ್ಶನ ಮಾಡಿ ತೆರಳಿದ್ದಾರೆ.