ಮುಂಬೈ: ಲೋಕಸಭಾ ಚುನಾವಣೆಯ ಮೊದಲ ಹಂತದ ಚುನಾವಣೆ ಗುರುವಾರ ಮುಗಿದಿದೆ. ದೇಶಾದ್ಯಂತ ರಾಜಕೀಯ ಮುಖಂಡರು ಅಬ್ಬರದ ಪ್ರಚಾರದ ಮೊರೆ ಹೋಗುತ್ತಿದ್ದಾರೆ. ರಾಜಕೀಯದಲ್ಲಿ ಗುರುತಿಸಿಕೊಂಡಿರುವ ಸಿನಿಮಾ ಕಲಾವಿದರು ತಮ್ಮ ಪಕ್ಷದ ಪರವಾಗಿ ಸಿನಿ ಅಭಿಮಾನಿಗಳ ಜೊತೆ ಪ್ರಚಾರ ನಡೆಸುತ್ತಿದ್ದಾರೆ. ಕೆಲವು ಕಲಾವಿದರು ತಮ್ಮ ಆಪ್ತ ನಾಯಕರ ಪರವಾಗಿ ಮತ ಯಾಚನೆ ಮಾಡುತ್ತಿದ್ದಾರೆ. ಈ ಚುನಾವಣಾ ಸುದ್ದಿಗಳ ಜೊತೆಗೆ ಎರಡು ದಿನಗಳಿಂದ ಬಾಲಿವುಡ್ ಕ್ಯೂಟ್ ಜೋಡಿ ರಣ್‍ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಬಿಜೆಪಿ ಶಾಲು ಹಾಕಿಕೊಂಡಿರುವ ಫೋಟೋ ವೈರಲ್ ಆಗಿದೆ.
ಏಕ್ ಬಿಹಾರಿ ಸೌ ಪೆ ಬಿಹಾರಿ ಎಂಬ ಫೇಸ್‍ಬುಕ್ ಖಾತೆಯಲ್ಲಿ ರಣ್‍ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಶಾಲು ಹಾಕಿಕೊಂಡಿರುವ ಫೋಟೋ ಅಪ್ಲೋಡ್ ಮಾಡಲಾಗಿದೆ. ಶಾಲ್ ಮೇಲೆ ‘ವೋಟ್ ಫಾರ್ ಬಿಜೆಪಿ’ ಎಂದು ಸಹ ಬರೆಯಲಾಗಿದೆ. ಫೋಟೋ ಕೆಳಗಡೆ ‘ಕಮಲದ ಬಟನ್ ಒತ್ತಿ, ದೇಶದ ಅಭಿವೃದ್ಧಿಯಲ್ಲಿ ಭಾಗಿಯಾಗಿ’ ಎಂದು ದೊಡ್ಡ ಅಕ್ಷರದಲ್ಲಿ ಬರೆಯಲಾಗಿದೆ.
ಎರಡು ದಿನಗಳ ಹಿಂದೆ ಈ ಫೋಟೋ ಅಪ್ಲೋಡ್ ಆಗಿದ್ದು, ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ತಿಳಿಸಿದ್ದಾರೆ. ದೀಪ್‍ವೀರ್ ಮದುವೆ ಬಳಿಕ ಅಂದರೆ ನವೆಂಬರ್ 2018ರಲ್ಲಿ ಮುಂಬೈನ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕೇಸರಿ ಶಾಲು ಹಾಕಿಕೊಂಡು ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಅಂದು ಕ್ಲಿಕ್ಕಿಸಿದ ಫೋಟೋದಲ್ಲಿ ಶಾಲು ಮೇಲೆ ಯಾವುದೇ ಅಕ್ಷರಗಳು ಇರಲಿಲ್ಲ. ಇದೀಗ ಅದೇ ಫೋಟೋದ ಶಾಲು ಮೇಲೆ ‘ವೋಟ್ ಫಾರ್ ಬಿಜೆಪಿ’ ಎಂಬ ಸಾಲು ಬರೆದು ಕೊಂಚ ಎಡಿಟ್ ಮಾಡಿ ಹರಿಬಿಡಲಾಗಿದೆ.
ಕೆಲವು ದಿನಗಳ ಹಿಂದೆ ‘ಮಹಾರಾಷ್ಟ್ರೀಯನ್ ಪ್ರಶಸ್ತಿ’ ಸಮಾರಂಭದಲ್ಲಿ ಮಾತನಾಡಿದ್ದ ದೀಪಿಕಾ ಪಡುಕೋಣೆ, ನಾನು ರಾಜಕೀಯದಿಂದ ದೂರ ಇರಲು ಇಷ್ಟಪಡುತ್ತೇನೆ. ಒಂದು ವೇಳೆ ಮಂತ್ರಿಯಾದರೆ ಸ್ವಚ್ಛತೆಯ ಸಚಿವೆಯಾಗಿ ಕೆಲಸ ಮಾಡಲು ಇಷ್ಟಪಡುತ್ತೇನೆ ಎಂದು ಹೇಳಿದ್ದರು.