ಯಾದಗಿರಿ: JNU ವಿದ್ಯಾರ್ಥಿಗಳ ಪರ ನಿಂತ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮತ್ತು ಮಂಗಳೂರು ಗಲಭೆಯ ವಿಡಿಯೋ ಬಿಡುಗಡೆ ಮಾಡಿದ ಮಾಜಿ ಸಿಎಂ ಬಗ್ಗೆ ಸುರಪುರ ಬಿಜೆಪಿ ಶಾಸಕ ರಾಜುಗೌಡ ಯಾದಗಿರಿಯಲ್ಲಿ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
ನಟರು ಮುಖಕ್ಕೆ ಬಣ್ಣ ಹಚ್ಚಿ ನಿರ್ದೇಶಕ ಹೇಳಿದಂತೆ ನಟನೆ ಮಾಡುತ್ತಾರೆ. ಅವರು ಸ್ವಂತ ಬುದ್ಧಿಯಿಂದ ಕೆಲಸ ಮಾಡುವುದು ಕಡಿಮೆ. ತಮ್ಮ ಫೇಮ್ ಮತ್ತು ಪಬ್ಲಿಸಿಟಿಗೆ ಏನು ಬೇಕು ಅದನ್ನು ಮಾತ್ರ ಮಾಡುತ್ತಾರೆ. ದುಡ್ಡು ಕೊಟ್ಟು ಹೋಗಿ ನೋಡುವ ಸಿನಿಮಾದಲ್ಲಿ ಮಾತ್ರ ದೀಪಿಕಾ ಪಡುಕೋಣೆಯನ್ನು ನೋಡೋಕೆ ಚೆನ್ನಾಗಿರುತ್ತೆ. ಅದು ಬಿಟ್ಟು ಅವರ ಇತಿಹಾಸ ತೆಗೆದುಕೊಂಡರೆ ಅವರ ಬಗ್ಗೆ ಉತ್ತರ ಸಿಗುತ್ತೆ. ಹೀಗಾಗಿ ನಾನು ನಟರ ಬಗ್ಗೆ ಹೆಚ್ಚಾಗಿ ಮಾತನಾಡುವುದಿಲ್ಲ. ಪಬ್ಲಿಸಿಟಿಗೋಸ್ಕರ ಮಾತನಾಡುವ ಬದಲಾಗಿ ಸತ್ಯದ ಬಗ್ಗೆ ಮಾತಾಡಲಿ ಎಂದು ಶಾಸಕ ರಾಜುಗೌಡ ಹೇಳಿದ್ದಾರೆ.
ಮಂಗಳೂರು ಗಲಭೆ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ವಿಡಿಯೋ ಬಿಡುಗಡೆ ವಿಚಾರ ಮಾತನಾಡಿದ ಅವರು, ಕುಮಾರಸ್ವಾಮಿ ರಾಜಕಾರಣಿಯಾಗುವುದಕ್ಕಿಂತ ಮೊದಲು ನಿರ್ಮಾಪಕರಾಗಿದ್ದು, ವೀಡಿಯೋ ಎಡಿಟಿಂಗ್ ಬಗ್ಗೆ ಅವರಿಗೆ ಚೆನ್ನಾಗಿ ಗೊತ್ತು. ಗಲಭೆ ವಿಚಾರ ಇಟ್ಟುಕೊಂಡು ಚೀಪ್ ಪಾಲಿಟಿಕ್ಸ್ ಮಾಡುವುದು ಸರಿಯಲ್ಲ. ರಾಜಕೀಯ ಪಿತೂರಿಯಿಂದ ಮಂಗಳೂರಿನಲ್ಲಿ ಉದ್ದೇಶ ಪೂರಕವಾಗಿ ಗಲಾಟೆಯಾಗಿದೆ ಎಂದರು.
ಪೊಲೀಸರು ಗಲಾಟೆ ವೀಡಿಯೋ ಬಿಡುಗಡೆ ಮಾಡಿದ ದಿನವೇ ಕುಮಾರಸ್ವಾಮಿಯವರು ತಮ್ಮ ವೀಡಿಯೋ ಬಿಡುಗಡೆ ಮಾಡಬೇಕಿತ್ತು. ಆದರೆ ಇಷ್ಟು ದಿನ ಯಾಕೆ ಸುಮ್ನಿದ್ದರು, ಅವರಿಗೆ ಜನರ ಬಗ್ಗೆ ಅಷ್ಟು ಕಾಳಜಿ ಇದ್ದರೆ ನೆರೆ ಬಂದ ಪ್ರದೇಶಗಳಿಗೆ ಬಂದು ಮಲಗಲಿ. ವಿರೋಧ ಪಕ್ಷದಲ್ಲಿರುವವರು ಇಂತಹ ವೀಡಿಯೋ ಬಿಡುಗಡೆ ಮಾಡಿ ಹೆಸರು ಪಡೆಯುವ ಬದಲು ಜನರ ಕಷ್ಟ ಆಲಿಸಲಿ ಎಂದು ಟಾಂಗ್ ನೀಡಿದ್ದಾರೆ.