ಕೈಯಲ್ಲಿ ಸುರ್‌ಸುರ್ ಬತ್ತಿ ಸುತ್ತಿಸುತ್ತ, ಕಾಲಿನಡಿ ‘ಕೃಷ್ಣನ ಚಕ್ರ’ ತಿರುಗಿಸುತ್ತಾ ಬೆಳಕಿನ ಚಿತ್ತಾರದಲ್ಲಿ ಕುಣಿದಾಡುವ ಕಲರ್‌ಫುಲ್ ದೀಪಾವಳಿ ಹಬ್ಬ (Deepavali Festival) ಆಚರಿಸೋದು ಯಾರಿಗೆ ತಾನೇ ಇಷ್ಟವಾಗಲ್ಲ ಹೇಳಿ? ಹಾಗೇ ಕಿವಿ ಗಡಚಿಕ್ಕುವಂತೆ ಶಬ್ಧ ಮಾಡುವ ಪಟಾಕಿ, ಆಕಾಶಕ್ಕೆ ಮಿಂಚು ಹೊಡೆದಂತೆ ಮಾಡುವ ಬಗೆ ಬಗೆಯ ರಾಕೆಟ್ ಹಾರಿಸೋದೇ ಒಂದು ಚೆಂದ. ಎಲ್ಲ ಸಮುದಾಯದ ಜನರೂ ಸಹ ಅಪ್ಪಿ.. ಒಪ್ಪಿ ಸ್ವಾಗತಿಸುವ ಈ ಹಬ್ಬಕ್ಕಾಗಿ ವರ್ಷದಿಂದ ಕಾಯುತ್ತಿರುತ್ತಾರೆ. ಈ ಹಬ್ಬಕ್ಕೆ ಇಂದು ತೆರೆ ಎಳೆಯುವ ಸಮಯ ಬಂದುಬಿಟ್ಟಿದೆ.
ದೀಪಾವಳಿ ಕತ್ತಲು ಸರಿಸಿ ಬೆಳಗುವ ಹಬ್ಬ ಮಾತ್ರವಲ್ಲ, ನಮ್ಮೊಳಗೂ ಬೆಳಕು ಹರಿವ ಧ್ಯೋತಕವೂ ಹೌದು. ದುಃಖ ದುಮ್ಮಾನಗಳನ್ನು ಸರಿಸಿ ಸಂತಸದ ಹಣತೆ ಹೊತ್ತಿಸುವ ದಿನವೇ ಈ ದೀಪಾವಳಿ.
ಹಬ್ಬದ ಆಚರಣೆ ಹಿಂದಿನ ಪುರಾಣಗಳೂ ಇದೇ ಸಾರವನ್ನ ಜಗತ್ತಿಗೆ ಸಾರಿವೆ. ಮನೆಯ ಮುಂದೆ ಹಚ್ಚಿಟ್ಟ ಸಾಲು ಸಾಲು ಹಣತೆಗಳು, ಬಾನಲ್ಲಿ ಬೆಳಕಿನ ಚಿತ್ತಾರ, ಒಮ್ಮೊಮ್ಮೆ ಬೆಚ್ಚಿಬೀಳಿಸುವ ಪಟಾಕಿ ಶದ್ಧ, ಹೊಸ ಬಟ್ಟೆ, ಸಿಹಿತಿನಿಸಿಗಳು… ದೀಪಾವಳಿ ಎಂದಾಕ್ಷಣ ಮನದಲ್ಲಿ ತೆರೆದುಕೊಳ್ಳುವ ಚಿತ್ರಗಳಿವು. ಆದ್ರೆ ಇವೆಲ್ಲದರೊಂದಿಗೆ ದೀಪಾವಳಿ ಶ್ರೇಷ್ಠ ಅನ್ನಿಸುವುದು ಅದರ ಆಚರಣೆ ಹಿಂದಿನ ಪುರಾಣಗಳಿಂದ, ಅವು ಸಾರಿರುವ ಸಂದೇಶಗಳಿಂದ. ಕತ್ತಲನ್ನು ಹೊಡೆದೋಡಿಸುವ ಸಂಕೇತವಾಗಿ ಆಚರಿಸುವ ದೀಪಾವಳಿ ಹಿಂದೆ ಹಲವು ಕಥೆಗಳಿವೆ. ಬೆಳಕಿನ ಈ ಹಬ್ಬಕ್ಕೆ ಪುರಾಣದ, ಸಂಪ್ರದಾಯ-ಸಂಸ್ಕೃತಿಯ ದೊಡ್ಡ ಹಿನ್ನೆಲೆಯೇ ಇದೆ.
ಹಲವು ಧರ್ಮಗಳಲ್ಲಿ ದೀಪಾವಳಿ ಆಚರಣೆ ನಡೆಯುತ್ತದೆ. ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು ಈ ಹಬ್ಬವನ್ನು ವಿವಿಧ ಕಾರಣಗಳಿಗೆ ಆಚರಿಸುತ್ತಾರೆ. ಹಿಂದೂಗಳ ಪ್ರಕಾರ, ರಾವಣನನ್ನು ಸಂಹರಿಸಿ ಅಯೋಧ್ಯೆಗೆ ಮರಳಿದ ರಾಮನಿಗೆ, ಊರಿನಲ್ಲಿ ಸಾಲು ದೀಪಗಳ ಸ್ವಾಗತ ನೀಡಿ, ಅಂದು ದೀಪಾವಳಿಯನ್ನು ಆಚರಿಸಲಾಯಿತು. ದುಷ್ಟಶಕ್ತಿ ಸಂಹಾರದ ಗುರುತಾಗಿ ಈ ಹಬ್ಬದ ಆಚರಣೆ ನಡೆಯಿತಂತೆ.
ಜೈನರಲ್ಲಿ, ಮಹಾವೀರರು ಮೋಕ್ಷ ಪಡೆದ ದಿನದ ಗುರುತಿಗೆ ಈ ದಿನ ಹಬ್ಬ ಆಚರಿಸುತ್ತಾರೆ. ಮಹಾವೀರರ ನಿರ್ವಾಣ ಸ್ಥಳವಾದ ಬಿಹಾರದ ಪಾವಾಪುರಿಗೆ ಯಾತ್ರೆ ಕೈಗೊಳ್ಳುವುದೂ ಇದೆ. ಸಿಖ್ಖರಿಗೆ ಗುರು ಹರಗೋವಿಂದರು ಮೊಘಲರಿಂದ ಬಿಡುಗಡೆಗೊಂಡ, ಹಲವು ರಾಜರನ್ನೂ ಬಂಧನದಿಂದ ಮುಕ್ತಗೊಳಿಸಿದ ದಿನ. ಈ ಹಬ್ಬ ಮನದ ದುಃಖವೆಂಬ ಬಂಧನದಿಂದ ಬಿಡುಗಡೆಗೊಳ್ಳುವ ಸೂಚಕವೂ ಹೌದಂತೆ.
ದಕ್ಷಿಣ ಭಾರತದಲ್ಲಿ ದೀಪಾವಳಿಯನ್ನು ಮೂರು ದಿನಗಳ ಕಾಲ ಆಚರಿಸುವ ರೂಢಿಯಿದೆ. ಆಚರಣೆಯು ಪ್ರದೇಶಗಳ ಮೇಲೆ ಅವಲಂಬಿತವಾಗಿರುತ್ತದೆ. ಜಗತ್ತಿಗೆ ಕಂಟಕನಾದ ನರಕಾಸುರನನ್ನು ಸಂಹಾರ ಮಾಡಿದ ದಿನವೇ ನರಕ ಚತುರ್ದಶಿ ಎಂದು ಆಚರಿಸಲಾಗುತ್ತದೆ. 2ನೇ ದಿನ ಲಕ್ಷ್ಮೀ ಪೂಜೆ, 3ನೇ ಬಲಿಪಾಢ್ಯಮಿ ದಿನದಂದು ಗೋ ಪೂಜೆ ಆಚರಿಸಲಾಗುತ್ತದೆ.
ರೈತಾಪಿ ವರ್ಗ ಕೃಷಿ ಕಾರ್ಯ ಮುಗಿಸುವ ಸಮಯ ಇದಾಗಿದ್ದು, ಮೈಗೊತ್ತಿಕೊಂಡಿರುವ ಭತ್ತದ ಜುಂಗನ್ನು ಬಿಡಿಸಲು ಕೊಯ್ಲು ಕೆಲಸ ಸಂಪೂರ್ಣ ಮುಗಿದ ನಂತರ ತೈಲಾಭ್ಯಂಜನ ಮಾಡಿಕೊಳ್ಳುತ್ತಿದ್ದರು. ಚರ್ಮಕ್ಕೆ ಆದ ತುರಿಕೆ, ನವೆಯನ್ನು ನಿವಾರಿಸಿಕೊಳ್ಳುವ ಚಿಕಿತ್ಸಾ ಪದ್ಧತಿಯಾಗಿ ಸ್ನಾನ ನಡೆಯುತ್ತಿತ್ತು. ಇದನ್ನೇ ನೀರು ತುಂಬುವ ಹಬ್ಬ ಎಂದು ಆಚರಿಸಲಾಗುತ್ತೆ. ಆ ದಿನ ಕೆಲವು ಔಷಧಿಯ ಗಿಡಮೂಲಿಕೆಗಳನ್ನು ನೀರಿಗೆ ಸೇರಿಸಿ ಕಾಯಿಸಿ, ಕುದಿಸಿ ಔಷಧಿಯ ಸಂಶಗಳನ್ನು ಎಣ್ಣೆಗೆ ಸೇರಿಸಿ, ವಿಶೇಷವಾಗಿ ತಯಾರಿಸಿ ಮೈಗೆ ಹಚ್ಚಿಕೊಂಡು ಬಿಸಿನೀರಿನಲ್ಲಿ ಸ್ನಾನ ಮಾಡಲಾಗುತ್ತದೆ. ಇದು ಸ್ನಾಯುಗಳನ್ನು ಗಟ್ಟಿಗೊಳಿಸುತ್ತದೆ. ಜೊತೆಗೆ ದೇಹ, ಮನಸ್ಸಿನ ಜಡ್ಡನ್ನು ತೊಡೆದುಹಾಕುತ್ತದೆ ಅನ್ನೋದು ನಂಬಿಕೆ.
ಹೀಗೆ ಹಲವು ವಿಧಗಳನ್ನ ದೀಪಾವಳಿ ಆಚರಣೆ ನಡೆಯುತ್ತದೆ. ಆದ್ರೆ ಆಚರಣೆಯ ಕವಲುಗಳು ಹಲವು ಇದ್ದರೂ ಉದ್ದೇಶ ಒಂದೇ. ಕತ್ತಲನ್ನು ತೊಲಗಿಸಿ, ಜ್ಞಾನ ದೀವಿಗೆಯನ್ನು ಮನದಲ್ಲಿ ಹೊತ್ತಿಸುವುದು ಆ ಬೆಳಕಿನಲ್ಲೇ ಬದುಕನ್ನು ನಡೆಸುವುದು. ಅದಕ್ಕಾಗಿ ಬದುಕಲ್ಲಿ ಮತ್ತೆ ಮತ್ತೆ ದೀಪಾವಳಿ ಆಚರಿಸೋಣ….

