ಬೆಂಗಳೂರು: ಸರ್ಕಾರದ ವಿರುದ್ಧ ಸಮರ ಸಾರಿರುವ ಸಾರಿಗೆ ನೌಕರರು (Transport Employees) ಪಟ್ಟು ಸಡಿಲಿಸುವಂತೆ ಕಾಣ್ತಿಲ್ಲ. ಅತ್ತ 5ನೇ ತಾರೀಖು ಬಂದ್ ಮಾಡೇ ಮಾಡುತ್ತೇವೆ ಅಂತ ಪಟ್ಟು ಹಿಡಿದಿದ್ರೆ, ಇತ್ತ ಸಾರಿಗೆ ನೌಕರರ ಬೇಡಿಕೆ ಈಡೇರಿಕೆ ಬಗ್ಗೆ ನಿರ್ಧಾರ ಮಾಡಬೇಕಿದ್ದ ಸಿಎಂ ಸಿದ್ದರಾಮಯ್ಯ ರಾಹುಲ್ ಗಾಂಧಿ ಪ್ರತಿಭಟನೆ (Rahul Gandhi Protest) ಸಮಾವೇಶದಲ್ಲಿ ಬ್ಯುಸಿಯಾಗಿದ್ದಾರೆ.
ಈ ಮಧ್ಯೆ ಇಂದು ಕೊನೆಯ ಮುಷ್ಕರದಿಂದ ಮನವೊಲಿಸುವ ನಿಟ್ಟಿನಲ್ಲಿ ಸಾರಿಗೆ ಮುಖಂಡರ ಜೊತೆ ಕೊನೆ ಹಂತದ ಹೈವೋಲ್ಟೇಜ್ ಸಭೆ ನಡೆಯಲಿದೆ. ಇದನ್ನೂ ಓದಿ: ಎಣ್ಣೆಯಲ್ಲಿ ಫ್ಯಾಟ್ ಚೆಕಿಂಗ್‌ಗೆ ಮುಂದಾದ ಹೋಟೆಲ್ ಮಾಲೀಕರು – ಡಿವೈಸ್ ಬೆಲೆ ಕೇಳಿ ಸುಸ್ತು!
ಹಿಂಬಾಕಿ, ಸಂಬಳ ಹೆಚ್ಚಳ ವಿಚಾರವಾಗಿ ಸರ್ಕಾರದ ವಿರುದ್ಧ ಸಮರ ಸಾರಿ ಮುಷ್ಕರಕ್ಕೆ ಕರೆ ಕೊಟ್ಟಿರುವ ಸಾರಿಗೆ ನೌಕರರು ಮುಷ್ಕರ ಮಾಡೇ ಮಾಡ್ತೀವಿ ಅಂತ ಪಟ್ಟು ಹಿಡಿದಿದ್ದಾರೆ. ಆಗಸ್ಟ್ 4ರ ತನಕ ಸರ್ಕಾರಕ್ಕೆ ಡೆಡ್‌ಲೈನ್ ನೀಡಿದ್ದು, ಡೆಡ್‌ಲೈನ್ ಮುಕ್ತಾಯಕ್ಕೆ ಇನ್ನೆರಡೇ ದಿನ ಮಾತ್ರ ಬಾಕಿ ಇದ್ದು ಸಮಸ್ಯೆ ಸಂಬಂಧ ಸಭೆ ಕರೆದು ಸಾರಿಗೆ ಮುಖಂಡರ ಜೊತೆ ಮಾತನಾಡಬೇಕಿದ್ದ ಸಿಎಂ, 5ನೇ ತಾರೀಖು ಬೆಂಗಳೂರಿನಲ್ಲಿ ನಡೆಯಲಿರುವ ರಾಹುಲ್ ಗಾಂಧಿ ಪ್ರತಿಭಟನೆಯಲ್ಲಿ ಬ್ಯುಸಿಯಾಗಿದ್ದು, ಮುಷ್ಕರ ಆರಂಭವಾಗೇ ಬಿಡುತ್ತಾ ಅನ್ನೋ ಟೆನ್ಷನ್ ಹೆಚ್ಚಾಗಿದೆ. ಇದನ್ನೂ ಓದಿ: ಹಿರಿಯ ಐಪಿಎಸ್ ಅಧಿಕಾರಿ ಬಿ.ದಯಾನಂದ್, ಪೊಲೀಸ್ ಆಯುಕ್ತ ಸೀಮಂತ್ ಕುಮಾರ್‌ಗೆ ರಾಷ್ಟ್ರಪತಿ ಪದಕ
ಹೌದು. ಸಮಸ್ಯೆ ಸಂಬಂಧ ಈ ಹಿಂದೆ ಮುಷ್ಕರಕ್ಕೆ ಕರೆಕೊಟ್ಟಿರೋ ಸಾರಿಗೆ ಮುಖಂಡರ ಜೊತೆ ಸಿಎಂ ಸಭೆ ಮಾಡಿದ್ರು. ಆದ್ರೆ ಸಭೆ ಯಶಸ್ಸು ಕಂಡಿರಲಿಲ್ಲ. ಆದಾದ ಮೇಲೆ ಆಗಸ್ಟ್ 4ರ ವರೆಗೆ ಡೆಡ್‌ಲೈನ್ ನೀಡಿ 5ರಿಂದ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆಕೊಡಲಾಗಿದ್ದು. ಸಾರಿಗೆ ಮುಖಂಡರು ಕೊಟ್ಟಿದ್ದ ಡೆಡ್‌ಲೈನ್ ಮುಕ್ತಾಯಕ್ಕೆ ಇನ್ನೆರೆಡು ದಿನ ಮಾತ್ರ ಬಾಕಿ ಇದೆ. ಡೆಡ್‌ಲೈನ್ ಹತ್ತಿರ ಬರ್ತಿದ್ರೂ ಸಿಎಂ ಮಾತ್ರ ಈ ಬಗ್ಗೆ ಹೆಚ್ಚು ಗಮನಕೊಟ್ಟಂತೆ ಕಾಣ್ತಿಲ್ಲ. ಸಾರಿಗೆ ಮುಷ್ಕರ ಆರಂಭವಾಗುವ ದಿನದಂತೆ ಬೆಂಗಳೂರಿನಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಯಲಿದೆ.
ಈ ಸಮಾವೇಶದ ಆಯೋಜನೆಯಲ್ಲಿ ಬ್ಯುಸಿಯಾಗಿರುವ ಸಿಎಂ ಸಾರಿಗೆ ಮುಷ್ಕರದ ಬಗ್ಗೆ ಗಮನ ಕೊಟ್ಟಂತೆ ಇಲ್ಲ. ಹಣಕಾಸು ಇಲಾಖೆ ಸಿಎಂ ಕೈಯಲ್ಲೇ ಇರುವ ಕಾರಣ, ಬೇಡಿಕೆ ಈಡೇರಿಕೆ ಸಂಬಂಧ ಸಿಎಂ ಮಾತ್ರ ನಿರ್ಧಾರ ಮಾಡೋಕೆ ಸಾಧ್ಯ. ಹೀಗಾಗಿ ಸಿಎಂ ಸಿದ್ದರಾಮಯ್ಯ ರಾಹುಲ್ ಗಾಂಧಿ ಪ್ರತಿಭಟನೆ ತಯಾರಿ ನಡುವೆ ಮುಖಂಡರ ಸಭೆ ಕರೆದು ಮನವೊಲಿಸುತ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ. ಇದನ್ನೂ ಓದಿ: ದೇಶದಲ್ಲಿ ಕರ್ನಾಟಕವೊಂದು ಆರ್ಥಿಕ ದೇಶ: ಬ್ರಿಡ್ಜ್ ಟು ಬೆಂಗಳೂರು ಕಾರ್ಯಕ್ರಮದಲ್ಲಿ ಸಿಎಂ ಅಭಿಪ್ರಾಯ
ಇನ್ನೂ ಈ ಮಧ್ಯೆ ಸಿಎಂ ಕೊಟ್ಟಿರುವ ಡೆಡ್‌ಲೈನ್ ಮುಕ್ತಾಯಕ್ಕೂ ಮುನ್ನ ಕಾರ್ಮಿಕ ಇಲಾಖೆ ಸಮ್ಮುಖದಲ್ಲಿ ಕೊನೆಯ ಹಂತದ ಮನವೊಲಿಕೆ ಪ್ರಯತ್ನ ನಡೆಯಲಿದೆ. ಇಂದು ಕಾರ್ಮಿಕ ಇಲಾಖೆ ಸಮ್ಮುಖದಲ್ಲಿ ಸಾರಿಗೆ ಇಲಾಖೆ 4 ನಿಗಮಗಳ ಅಧಿಕಾರಿಗಳು, ಸಾರಿಗೆ ಸಂಘಟನೆ ಮುಖಂಡರ ಸಭೆ ನಡೆಯಲಿದೆ. ಇಂದು ಬೆಳಗ್ಗೆ 11.30ಕ್ಕೆ ಸಭೆ ನಡೆಯಲಿದ್ದು, ಸಭೆಯಲ್ಲಿ ಅಧಿಕಾರಿಗಳು ಕೆಲವು ಭರವಸೆ ನೀಡುವ ಸಾಧ್ಯತೆ ಇದೆ. ಆದರೆ ಇತ್ತ ಯಾವುದೇ ಕಾರಣ ಬೇಡಿಕೆ ಈಡೇರುವ ಬಗ್ಗೆ ಘೋಷಣೆಯಾಗದ ಹೊರತು ನಾವಂತೂ ಮುಷ್ಕರ ಹಿಂಪಡೆಯಲ್ಲ ಅಂತ ಮುಖಂಡರು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಇಂದಿನ ಸಭೆ ಕೂಡ ಸಾಕಷ್ಟು ಕುತೂಹಲ ಕೆರಳಿಸಿದೆ.