ಸ್ಯಾಂಡಲ್‌ವುಡ್ ನಟ ಶಿವಣ್ಣ (Shivarajkumar) ಅವರಿಗೆ ಡಿ.24ರಂದು ಅಮೆರಿಕದಲ್ಲಿ ಸರ್ಜರಿ ಇರುವ ಹಿನ್ನೆಲೆ ನಟನ ಹೆಸರಲ್ಲಿ ಮಲ್ಲೇಶ್ವರಂನಲ್ಲಿರುವ ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ, ಹೋಮ ಜರುಗಿದೆ.
ನಟ ಶಿವಣ್ಣಗೆ ಕಳೆದ 32 ವರ್ಷಗಳಿಂದ ಕಾರು ಡ್ರೈವರ್ ಆಗಿರುವ ಗೋವಿಂದಣ್ಣ ಅವರು ನಟನ ಸರ್ಜರಿ ಫಲಿಸಲೆಂದು ವಿಶೇಷ ಪೂಜೆ ಮಾಡಿಸಿದ್ದಾರೆ. ಗಣಪತಿ ಪೂಜೆ ಮತ್ತು ಹೋಮ, ಗುರು ಪ್ರಾರ್ಥನ ಸಂಕಲ್ಪ, ನವಗ್ರಹ ಪೂಜೆ, ಮೃತ್ಯುಂಜಯ ಪೂಜೆ, ಸುದರ್ಶನ ಪೂಜೆ ಮಾಡಿಸಿದ್ದಾರೆ.
ಮಿಯಾಮಿ ಕ್ಯಾನ್ಸರ್ ಇನಿಸ್ಟಿಟ್ಯೂಟ್ (Miami Cancer Institute) ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ (Operation) ದಾಖಲಾಗಲಿರುವ ಶಿವರಾಜ್‌ಕುಮಾರ್‌ಗೆ ಅಲ್ಲಿ ಭಾರತ ಮೂಲದ ಮುರುಗೇಶ್ ನೇತೃತ್ವದ ತಜ್ಞವೈದ್ಯರ ತಂಡದಿಂದ ಚಿಕಿತ್ಸೆ ನಡೆಯಲಿದೆ.
ಮಿಯಾಮಿ ಕ್ಯಾನ್ಸರ್ ಇನಿಸ್ಟಿಟ್ಯೂಟ್ ನೆಕ್ಷ್ಟ್ ಜನರೇಶನ್ ಕ್ಯಾನ್ಸರ್ ಚಿಕಿತ್ಸಾ ಆಸ್ಪತ್ರೆಯಾಗಿದ್ದು, ವೈದ್ಯಕೀಯ ಆರೈಕೆ, ಸಂಶೋಧನೆ, ಹಾಗೂ ಆಧುನಿಕ ತಂತ್ರಜ್ಞಾನಕ್ಕೆ ಹೆಸರುವಾಸಿಯಾಗಿದೆ.
ವಿಶ್ವಮಾನ್ಯತೆ ಪಡೆದ ಆಂಕೋಲಾಜಿಸ್ಟ್‌ಗಳೆಂದು ಕರೆಯಲಾಗುವ ತಜ್ಞ ವೈದ್ಯರ ತಂಡ ಇದೆ. ಇವರು ಜಗತ್ತಿನ ಉನ್ನತ ಕ್ಯಾನ್ಸರ್ ಕೇಂದ್ರಗಳಿಂದ ನೇಮಕಗೊಂಡ ವೈದ್ಯರುಗಳಾಗಿದ್ದು, ಇಲ್ಲಿ ಶಸ್ತ್ರ ಚಿಕಿತ್ಸೆಯಿಂದ ಗುಣವಾಗುವ ಪ್ರಮಾಣ ಹೆಚ್ಚಿದೆ. ಈ ಕಾರಣಕ್ಕೆ ಹಲವು ದೇಶಗಳಿಂದ ಚಿಕಿತ್ಸೆಗೆ ಇಲ್ಲಿಗೆ ಆಗಮಿಸುತ್ತಿದ್ದಾರೆ.
ಅತ್ಯಾಧುನಿಕ ಸುಧಾರಿತ ಲೇಸರ್ ತಂತ್ರಜ್ಞಾನ ಒಂದೇ ಸ್ಥಳದಲ್ಲಿ ಲಭ್ಯವಿದ್ದು ಪ್ರತಿಯೊಂದು ವಿಧದ ಕ್ಯಾನ್ಸರ್ ಚಿಕಿತ್ಸೆಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಈ ಕಾರಣಕ್ಕೆ ಶಿವರಾಜ್ ಕುಮಾರ್ ಭರ್ತಿ ಒಂದು ತಿಂಗಳುಗಳ ಕಾಲ ಅಲ್ಲೇ ಚಿಕಿತ್ಸೆ ಪಡೆದು ಸ್ವದೇಶಕ್ಕೆ ಮರಳಲಿದ್ದಾರೆ.