ಬೆಂಗಳೂರು: ಬಜೆಟ್ (Budget) ಮೇಲಿನ ಭಾಷಣದ ಚರ್ಚೆ ಗುಂಡಿನತ್ತ ತಿರುಗಿ ವಿಧಾನ ಪರಿಷತ್ (Vidhana Parishad) ಕಲಾಪದಲ್ಲಿ ಕೆಲ ಕಾಲ ಗುಂಡಿನ ಮತ್ತಿನ ಗಮ್ಮತ್ತಾಯಿತು. ಗುಂಡಿನ ಚರ್ಚೆಗೆ ಇಡೀ ಸದನವೇ ನಗೆಗಡಲಲ್ಲಿ ತೇಲಾಡಿತು. ಸರ್ವ ರೋಗಕ್ಕೂ ಸಾರಾಯಿ ಮದ್ದು ಅಂತ ಮಾತಿದೆ ಎಂದು ಗುಂಡಿನ ಬಗೆಗಿನ ಚರ್ಚೆಯನ್ನು ಹಾಸ್ಯದ ರೀತಿಯಲ್ಲಿ ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್ (H Vishwanath) ಸಮರ್ಥನೆ ಮಾಡಿಕೊಂಡರು.
Advertisement
ವಿಧಾನ ಪರಿಷತ್ ವಿತ್ತೀಯ ಕಾರ್ಯಕಲಾಪದಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಮೊದಲಿಗರಾಗಿ ಮಾತನಾಡಿದ ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್, ಕಾಂಗ್ರೆಸ್ ಬಜೆಟ್ ಬೆಂಬಲಿಸಿಕೊಂಡು ಮಾತನಾಡಿದರು. ಶಾಸನ ಸಭೆಗೆ ಬರೋದು ಜನರ ಸಮಸ್ಯೆ, ದುಃಖಗಳ ಬಗ್ಗೆ ಚರ್ಚೆ ಮಾಡುವುದಕ್ಕೆ. ಆದರೆ ಇವತ್ತು ವ್ಯವಸ್ಥೆ ಬದಲಾಗಿದೆ ಅಂತ ಕಳವಳ ವ್ಯಕ್ತಪಡಿಸಿದರು.
Advertisement
ಈ ವೇಳೆ ಮಾತನಾಡುವಾಗ ಗುಂಡಿನ ಚರ್ಚೆಗೆ ವಿಷಯ ತಿರುಗಿತು. ಅತಿ ಹೆಚ್ಚು ಸರಕು ಮತ್ತು ಸೇವಾ ತೆರಿಗೆ (GST) ಕಟ್ಟುವುದು ನಾವು. ಜನ ಬೆಳಗ್ಗೆ ಎದ್ದರೆ ಜಿಎಸ್‍ಟಿ ಕಟ್ಟಬೇಕು. ಹಾಲು, ಪೇಪರ್ ಸೇರಿ ಎಲ್ಲದ್ದಕ್ಕೂ ಜಿಎಸ್‍ಟಿ. ನಾವು ರಾತ್ರಿ ಮಲಗೋವರೆಗೂ ಜಿಎಸ್‍ಟಿ ಕಟ್ಟುತ್ತೇವೆ ಎಂದರು.
Advertisement
Advertisement
ಈ ವೇಳೆ ಗುಂಡಿನ ಬಗ್ಗೆ ಹೇಳಲಿಲ್ಲವಲ್ಲ ಎಂದು ಬಿಜೆಪಿ ಸದಸ್ಯರು ವಿಶ್ವನಾಥ್ ಕಾಲೆಳೆದರು. ಈ ವೇಳೆ ಸಮ್ಮಿಶ್ರ ಸರ್ಕಾರದ ಪತನದ ವಿಚಾರ ಪ್ರಸ್ತಾಪ ಮಾಡಿದ ವಿಶ್ವನಾಥ್, ಸಮ್ಮಿಶ್ರ ಸರ್ಕಾರದ ಪತನ ಸಮಯದಲ್ಲಿ ವೈಎ ನಾರಾಯಣಸ್ವಾಮಿ ಮನೆಯಲ್ಲಿ ಸೇರುತ್ತಿದ್ದೆವು. ಸಮ್ಮಿಶ್ರ ಸರ್ಕಾರ ಪತನಕ್ಕೆ ನಾರಾಯಣಸ್ವಾಮಿ ಮನೆಯಲ್ಲಿ ಸೇರುವಾಗ ಗುಂಡು ಹೊಡೆಯುತ್ತಿದ್ದೆವು ಎಂದ ಬಿಜೆಪಿ (BJP) ಸದಸ್ಯರ ಕಾಲೆಳೆದರು. ಇದನ್ನೂ ಓದಿ: ಸರ್ಕಾರದಿಂದ ವೆಬ್ ಸೀರೀಸ್ ಪ್ರಶಸ್ತಿ ಘೋಷಿಸಿದ ಸಚಿವ ಅನುರಾಗ್ ಠಾಕೂರ್
ನಾರಾಯಣಸ್ವಾಮಿ (Narayanaswamy) ಮನೆಯಲ್ಲಿ ಎಣ್ಣೆ ಹೊಡೆದಿದ್ದೇವೆ ಎಂದಿದ್ದ ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಛಲವಾದಿ ನಾರಾಯಣಸ್ವಾಮಿ, ಯಾವ ನಾರಾಯಣಸ್ವಾಮಿ ಎಂದು ವಿಶ್ವನಾಥ್ ಹೇಳಬೇಕು. ನಾನು ಈ ಎಣ್ಣೆ ವಿಚಾರದಲ್ಲಿ ಇಲ್ಲ ಎಂದರು. ಈ ವೇಳೆ ಸದನದಲ್ಲಿ ಹಾಸ್ಯದ ಹೊನಲು ಹರಿಯಿತು.
ವಿಶ್ವನಾಥ್ ಮಾತಿಗೆ ಸದನದಲ್ಲಿ 10 ನಿಮಿಷ ಗುಂಡಿನ ಬಗ್ಗೆ ಚರ್ಚೆಯಾಯಿತು. ತೇಜಸ್ವಿನಿಗೌಡ, ರವಿಕುಮಾರ್, ಭಾರತಿ ಶೆಟ್ಟಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ಹಾಸ್ಯಭರಿತ ಎಣ್ಣೆ ಬಗ್ಗೆ ಚರ್ಚೆಯಾಯಿತು. ಇದನ್ನೂ ಓದಿ: ಬಿಎಸ್‍ವೈ ಭೇಟಿಯಾಗಿ ಆಶೀರ್ವಾದ ಪಡೆದ್ರು ಸಿ.ಟಿ ರವಿ!
ನಂತರ ವೈ.ಎ.ನಾರಾಯಣಸ್ವಾಮಿ ಮಾತನಾಡಿ, ನಾನು ವಿಶ್ವನಾಥ್ ಜೊತೆಗೆ ಇದ್ದೆವು. ವಿಶ್ವನಾಥ್ ಈಗ ಗುಂಡು ಹೊಡೆಯುವುದು ಬಿಟ್ಟಿದ್ದಾರೆ. ಬಜೆಟ್ ಬಗ್ಗೆ ಮಾತನಾಡುವಾಗ ಲಾಟರಿ, ಸಾರಾಯಿ ನಿಷೇಧ ಮಾಡಿದ್ದು ಸರ್ಕಾರಕ್ಕೆ ಹೇಳಿ ಎಂದು ಕಿಚಾಯಿಸಿದರು.
ಈ ವೇಳೆ ಮಾತನಾಡಿದ ಬಿಜೆಪಿ ಸದಸ್ಯ ರವಿಕುಮಾರ್ ಮಧ್ಯದ ಸುಂಕ ಹೆಚ್ಚಾಗಿದೆ. ಮದ್ಯಪ್ರಿಯರ ಬಗ್ಗೆ ಕಾಳಜಿಯಿಂದ ಇದರ ಬಗ್ಗೆಯೂ ಬೆಳಕು ಚೆಲ್ಲಲಿ ಎಂದರು. ತೇಜಸ್ವಿನಿಗೌಡ ಮಾತನಾಡಿ, ಇದರ ಬಗ್ಗೆ ಈಗ ಬೆಳಕನ್ನ ಚೆಲ್ಲಲು ಆಗುವುದಿಲ್ಲ. ಇದು ರಾತ್ರಿಯಲ್ಲಿ ನಡೆಯುವ ವಿಷಯ ಎಂದು ಹಾಸ್ಯ ಚಟಾಕಿ ಹಾರಿಸಿದರು. ಭಾರತಿ ಶೆಟ್ಟಿ ಮಾತನಾಡಿ, ಗುಂಡು ಹೊಡೆದವರ ಜೊತೆ ನಾವು ಬದುಕುತ್ತಿದ್ದೇವೆ ಎಂದರು.
ಬಿಜೆಪಿ ಸದಸ್ಯರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಭಾ ನಾಯಕ ಬೋಸರಾಜ್, ಗುಂಡು ಹಾನಿಕರ ಎಂದು ಅದನ್ನ ಕಡಿವಾಣ ಹಾಕಬೇಕೆಂದು ಅದರ ಮೇಲೆ ಸುಂಕ ಹೆಚ್ಚು ಮಾಡಿದ್ದೇವೆ ಎಂದು ಅಬಕಾರಿ ಸುಂಕ ಹೆಚ್ಚಳ ಸಮರ್ಥಿಸಿಕೊಂಡರು.
ನಂತರ ಮಾತನಾಡಿದ ವಿಶ್ವನಾಥ್, ಗುಂಡಿನ ಬಗ್ಗೆ ಚರ್ಚೆ ವೇಳೆ ಮಾತಾಡುತ್ತಿದ್ದ ಭಾರತಿ ಶೆಟ್ಟಿ, ತೇಜಸ್ವಿನಿಗೌಡ ಇಬ್ಬರಿಗೂ ಟಾಂಗ್ ಕೊಟ್ಟರು. ಗುಂಡು ಹೊಡೆಯದೆ ಇರುವ ಇವರಿಗೆ ಇಷ್ಟು ಗುಂಡಿಗೆ ಇರೋದಾದರೆ ಗುಂಡು ಹಾಕೋ ನಮಗೆ ಎಷ್ಟು ಗುಂಡಿಗೆ ಇರಬೇಕು ಎಂದು ಹಾಸ್ಯ ಚಟಾಕಿ ಹಾರಿಸಿದರು.
ನಾವು ಗೆದ್ದಾಗಲೂ ಕುಡಿಯುತ್ತೇವೆ. ಸೋತಾಗಲೂ ಕುಡಿಯುತ್ತೇವೆ. ಸತ್ತಾಗಲೂ ಕುಡಿಯುತ್ತೇವೆ. ಸರ್ವ ರೋಗಕ್ಕೂ ಸಾರಾಯಿ ಮದ್ದು ಅಂತ ಮಾತಿದೆ ಎಂದು ಗುಂಡಿನ ಬಗೆಗಿನ ಚರ್ಚೆಯನ್ನು ಹಾಸ್ಯದ ರೀತಿ ಸಮರ್ಥನೆ ಮಾಡಿಕೊಂಡರು ಸದನ ನಗೆಗಡಲಲ್ಲಿ ತೇಲೀತು.
Web Stories