– ಹೋಟೆಲ್ ಬಿಲಾಸ್ ಇನ್ನ ಮಾಲೀಕನೂ ಬಲಿ
ಗುವಾಹಟಿ: ಅಸ್ಸಾಂನ ಗುವಾಹಟಿಯ ಲಚಿತ್ ನಗರದಲ್ಲಿರುವ ಹೋಟೆಲ್ ಬಿಲಾಸ್ ಇನ್ನಲ್ಲಿ ಸೋಮವಾರ ರಾತ್ರಿ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಮಹಿಳೆಯರು ಸೇರಿ 6 ಮಂದಿ ಬಲಿಯಾಗಿದ್ದಾರೆ.
ಗುವಾಹಟಿಯ ಬೋರಾ ಸರ್ವಿಸ್ ಸಮೀಪ ನಡೆದ ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಅವರನ್ನು ಗುವಾಹಟಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ತಡರಾತ್ರಿ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಗುವಾಹಟಿ ಪೊಲೀಸ್ ಆಯುಕ್ತರು 6 ಮಂದಿ ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ. ಮೃತ ಆರು ಮಂದಿಯಲ್ಲಿ ಹೋಟೆಲ್ ಬಿಲಾಸ್ ಇನ್ನ ಮಾಲೀಕರಾದ ಹೆಲೆನಾ ಭಾರಾಲಿ ಹಾಗೂ ಅವರ ಪುತ್ರ ಕೂಡ ಸೇರಿದ್ದಾರೆ ಎಂದು ವರದಿಯಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಆಸ್ತಿ ವಿವಾದದ ಹಿನ್ನೆಲೆ ಈ ಗುಂಡಿನ ದಾಳಿ ನಡೆದಿರುವ ಶಂಕೆ ವ್ಯಕ್ತವಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು ಹಾಗೂ ಆಂಬುಲೆನ್ಸ್ಗಳು ಸ್ಥಳಕ್ಕೆ ಧಾವಿಸಿವೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸುತ್ತಿದ್ದು, ಘಟನೆಯ ಸಂಪೂರ್ಣ ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ.
ಹೋಟೆಲ್ ಸಿಬ್ಬಂದಿಗೂ ಗುಂಡೇಟು
ಗುಂಡಿನ ದಾಳಿಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಹಲವು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಹೋಟೆಲ್ ಬಿಲಾಸ್ ಇನ್ನ ಉದ್ಯೋಗಿಯೊಬ್ಬರೂ ಸೇರಿದ್ದಾರೆ. ಗಾಯಾಳುಗಳಿಗೆ ಗುವಾಹಟಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
