ಇಸ್ಲಾಮಾಬಾದ್: ಭಾರತೀಯ ಸೇನೆ ʻಆಪರೇಷನ್ ಸಿಂಧೂರʼ (Operation Sindoor) ಹೆಸರಿನಡಿ ಉಗ್ರ ನೆಲೆಗಳ ಮೇಲೆ ನಡೆಸಿದ ಪ್ರತೀಕಾರದ ದಾಳಿಯಲ್ಲಿ 31 ಮಂದಿ ಸಾವನ್ನಪ್ಪಿದ್ದು, 46 ಮಂದಿ ಗಾಯಗೊಂಡಿರುವುದಾಗಿ ಪಾಕ್ ಸೇನೆ (Pakistan Army) ಹೊಣೆ ಹೊತ್ತುಕೊಂಡಿದೆ.
ಭಾರತದ ದಾಳಿಯಲ್ಲಿ JEM ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ ಕುಟುಂಬದ 10 ಜನ ಸೇರಿದಂತೆ ಒಟ್ಟು 31 ಮಂದಿ ಸಾವನ್ನಪ್ಪಿದ್ದು, 46 ಮಂದಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಿರಬಹುದು ಎಂದು ಪಾಕ್ ಸೇನಾ ವಕ್ತಾರರು ಹೇಳಿರುವುದಾಗಿ ವರದಿಗಳು ತಿಳಿಸಿವೆ. ಇದನ್ನೂ ಓದಿ: ಪ್ರತಿ ರಕ್ತದ ಹನಿಗೂ ಸೇಡು ತೀರಿಸಿಕೊಳ್ತೀವಿ – ಪಾಕ್ ಪ್ರಧಾನಿ ಶೆಹಬಾಜ್ ಷರೀಫ್
ಏನಿದು ʻಆಪರೇಷನ್ ಸಿಂಧೂರʼ?
ಕಳೆದ ಏಪ್ರಿಲ್ 22ರಂದು ಕಾಶ್ಮೀರದ ಪೆಹಲ್ಗಾಮ್‌ನ ಬೈಸರನ್ ಕಣಿವೆ ಪ್ರದೇಶದಲ್ಲಿ ನಾಲ್ವರು ಉಗ್ರರು ಓರ್ವ ವಿದೇಶಿ ಪ್ರಜೆ ಸೇರಿದಂತೆ 26 ಪ್ರವಾಸಿಗರನ್ನ ಗುಂಡಿಕ್ಕಿ ಕೊಂದಿದ್ದರು. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಪಣ ತೊಟ್ಟಿದ್ದ ಭಾರತ ಮಂಗಳವಾರ ತಡರಾತ್ರಿ 1:44 ಗಂಟೆ ಸುಮಾರಿಗೆ ಪಾಕ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದೆ. ದಾಳಿಯಲ್ಲಿ ಪಾಕ್ ಸೇನೆಯಾಗಲಿ ಅಥವಾ ನಾಗರಿಕರ ಮೇಲಾಗಲಿ ದಾಳಿ ಮಾಡದೇ ಉಗ್ರರ ನೆಲೆಗಳನ್ನು ಮಾತ್ರವೇ ಗುರಿಯಾಗಿಸಿ ದಾಳಿ ನಡೆಸಿದೆ. ಇದನ್ನೂ ಓದಿ: `ಆಪರೇಷನ್ ಸಿಂಧೂರ’ಕ್ಕೆ ತತ್ತರಿಸಿದ ಪಾಕ್ – ತುರ್ತು ಪರಿಸ್ಥಿತಿ ಘೋಷಣೆ
ಮೋಸ್ಟ್‌ವಾಂಟೆಡ್‌ಗಳನ್ನ ತಯಾರು ಮಾಡ್ತಿದ್ದ ನೆಲೆಗಳು ಧ್ವಂಸ:
ಭಾರತ ಧ್ವಂಸ ಮಾಡಿರುವ ಈ ಉಗ್ರರ ನೆಲೆಗಳು ಮೋಸ್ಟ್ ಡೇಂಜರಸ್ ತಾಣಗಳು ಎಂದೇ ಗುರುತಿಸಿಕೊಂಡಿದ್ದು, ಇಡೀ ವಿಶ್ವಕ್ಕೆ ಕಂಟಕವಾಗಿದ್ದವು. ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಇಲ್ಲಿ ಅಡಗಿಸಿಡಲಾಗಿತ್ತು. ಜೊತೆಗೆ ವಿಶ್ವಾದ್ಯಂತ ವಿವಿಧೆಡೆಗೆ ಕಳುಹಿಸಲು ಉಗ್ರರಿಗೆ ಇಲ್ಲಿ ತರಬೇತಿ ನೀಡಲಾಗುತ್ತಿತ್ತು ಅನ್ನೋ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಕುಟುಂಬದ 10 ಜನರ ಹತ್ಯೆ – ಅವರೆಲ್ಲರೂ ಅಲ್ಲಾನ ಅತಿಥಿಗಳಾಗಿದ್ದಾರೆ ಎಂದ ಉಗ್ರ ಮಸೂದ್
ದಾಳಿ ಒಪ್ಪಿಕೊಳ್ಳದ ಪಾಕ್:
ಅಲ್ಲದೇ ಏಪ್ರಿಲ್ 22ರಂದು ನಡೆದ ಪಹಲ್ಗಾಮ್ ದಾಳಿ ಕುರಿತು ಮತ್ತೆ ಪ್ರಸ್ತಾಪಿಸಿದ ಷರೀಫ್, ಪಹಲ್ಗಾಮ್ ದಾಳಿ ನಡೆದಾಗ ನಾನು ಟರ್ಕಿಗೆ ಭೇಟಿ ನೀಡಿದ್ದೆ. ಈ ದಾಳಿಗೂ ನಮಗೂ ಯಾವುದೇ ಸಂಬಂಧವಿಲ್ಲ. ಆಗಲೇ ನಾವು ಈ ಬಗ್ಗೆ ಸ್ಪಷ್ಟನೆ ನೀಡಿದ್ದೇವೆ, ತನಿಖೆಗೆ ಸಹಕರಿಸಲೂ ಸಿದ್ಧರಿದ್ದೇವೆ ಎಂದು ಹೇಳಿದ್ದೆವು. ಆದ್ರೆ ಭಾರತ ನಮ್ಮ ಸ್ಪಷ್ಟನೆಯನ್ನು ಸ್ವೀಕರಿಸದೇ ದಾಳಿ ನಡೆಸಿದೆ ಎಂದು ಹೇಳಿದ್ದಾರೆ.