ಹಾಂಗ್‌ಕಾಂಗ್: ಹಾಂಗ್‌ಕಾಂಗ್‌ನ (Hong Kong) ತೈಪೊ ಜಿಲ್ಲೆಯ ವಾಂಗ್ ಫುಕ್ ಕೋರ್ಟ್ ಎಂಬ 8 ಬಹುಮಹಡಿ ಕಟ್ಟಡಗಳ ಸಂಕೀರ್ಣದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ (Fire Accident) ಮೃತಪಟ್ಟವರ ಸಂಖ್ಯೆ 94ಕ್ಕೆ ಏರಿಕೆಯಾಗಿದೆ. 2ನೇ ದಿನವಾದ ಗುರುವಾರವೂ ಬೆಂಕಿ ವ್ಯಾಪಿಸಿದ್ದರಿಂದ ಅಪಾರ ಪ್ರಮಾಣದ ಸಾವು ನೋವಾಯಿತು.
ಸದ್ಯ ಬೆಂಕಿಯನ್ನ ನಿಯಂತ್ರಣಕ್ಕೆ ತರಲಾಗಿದ್ದು, ಅಗ್ನಿಶಾಮಕ ಕಾರ್ಯಾಚರಣೆ ಬಹುತೇಕ ಪೂರ್ಣಗೊಂಡಿದೆ ಎಂದು ಅಗ್ನಿಶಾಮಕ ಸೇವೆಗಳ ಕಾರ್ಯಾಚರಣೆಗಳ ಉಪ ನಿರ್ದೇಶಕ ಡೆರೆಕ್ ಆರ್ಮ್‌ಸ್ಟ್ರಾಂಗ್ ಚಾನ್ ತಿಳಿಸಿದ್ದಾರೆ.

ಗುರುವಾರ ಬೆಳಗ್ಗೆ ಹೊತ್ತಿಗೆ 279 ಜನರೊಂದಿಗೆ ಸಂಪರ್ಕ ಕಡಿತಗೊಂಡಿದೆ. ಮತ್ತೊಂದು ಕಡೆ 44 ಇದ್ದ ಸಾವಿನ ಸಂಖ್ಯೆ 94ಕ್ಕೆ ಏರಿಕೆಯಾಗಿದೆ. ಅನೇಕರು ನಾಪತ್ತೆಯಾಗಿದ್ದು, ಸಾವುನೋವು ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹಾಂಗ್ ಕಾಂಗ್‌ನ ಹಿರಿಯ ನಾಯಕ ಜಾನ್ ಲೀ ಹೇಳಿದ್ದಾರೆ ಎಂದು ವರದಿಯಾಗಿದೆ.
ಸುಮಾರು 2,000 ಅಪಾರ್ಟ್‌ಮೆಂಟ್‌ಗಳನ್ನ ಹೊಂದಿರುವ ಈ ಬೃಹತ್ ವಸತಿ ಸಮುಚ್ಚಯದಲ್ಲಿ ದುರಸ್ತಿ ಮತ್ತು ನಿರ್ವಹಣಾ ಕಾರ್ಯಗಳು ನಡೆಯುತ್ತಿದ್ದವು. ಇದಕ್ಕಾಗಿ ಕಟ್ಟಡಗಳ ಹೊರಭಾಗದಲ್ಲಿ ಬಿದಿರಿನ ಅಟ್ಟಣಿಗೆ ರಚಿಸಲಾಗಿತ್ತು. ಈ ಬಿದಿರಿನ ರಚನೆಗಳಿಗೆ ಮೊದಲು ಬೆಂಕಿ ಹೊತ್ತಿಕೊಂಡಿದ್ದು, ಬಲವಾದ ಗಾಳಿ ಮತ್ತು ಉರಿಯುತ್ತಿದ್ದ ಅವಶೇಷಗಳು ತೂರಿಬಂದ ಪರಿಣಾಮ, ಪಕ್ಕದ 7 ಕಟ್ಟಡಗಳಿಗೂ ಬೆಂಕಿ ವ್ಯಾಪಿಸಿತ್ತು.

ಅಗ್ನಿಶಾಮಕ ಸಿಬ್ಬಂದಿಯೂ ಸಾವು
ಮೊದಲ ದಿನ ಬೆಂಕಿಯ ತೀವ್ರತೆಗೆ ಕಿಟಕಿಗಳ ಮೂಲಕ ಜ್ವಾಲೆಗಳು ಹೊರಬರುತ್ತಿದ್ದವು ಮತ್ತು ಬಿದಿರು ಸಿಡಿಯುವ ಶಬ್ದಗಳು ಜೋರಾಗಿ ಕೇಳಿಸುತ್ತಿದ್ದವು ಎಂದು ಪ್ರತ್ಯಕ್ಷದರ್ಶಿಗಳು ಹೇಳಿಕೊಂಡಿದ್ದರು. ಘಟನಾ ಸ್ಥಳದಲ್ಲೇ 9 ಜನರನ್ನು ಮೃತರೆಂದು ಘೋಷಿಸಲಾದರೆ, ಆಸ್ಪತ್ರೆಗೆ ಸಾಗಿಸಿದ ನಂತರ ಉಳಿದವರು ಸಾವನ್ನಪ್ಪಿದ್ದಾರೆ. ದುರದೃಷ್ಟವಶಾತ್, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ಓರ್ವ ಅಗ್ನಿಶಾಮಕ ಸಿಬ್ಬಂದಿ ಕೂಡ ಪ್ರಾಣ ಕಳೆದುಕೊಂಡರು.
ಇನ್ನೂ ನೂರಾರು ಜನರು ನಾಪತ್ತೆಯಾಗಿದ್ದು, ಮೃತರ ಸಂಖ್ಯೆ ದೊಡ್ಡ ಮಟ್ಟಕ್ಕೆ ಏರಿಕೆಯಾಗುವ ಆತಂಕವಿದೆ. ಕಟ್ಟಡಗಳ ಒಳಗೆ ಉಷ್ಣಾಂಶ ವಿಪರೀತವಾಗಿರುವುದರಿಂದ ಮೊದಲ ದಿನದ ಕಾರ್ಯಾಚರಣೆಯಲ್ಲಿ ಕೆಲವು ಕೆಲವು ಮಹಡಿಗಳಿಗೆ ಅಗ್ನಿಶಾಮಕ ಸಿಬ್ಬಂದಿ ತಲುಪಲು ಸಾಧ್ಯವಾಗಿರಲಿಲ್ಲ.
ಮೂವರ ಬಂಧನ
ಘಟನೆಗೆ ಸಂಬಂಧಿಸಿದಂತೆ ಹಾಂಗ್‌ಕಾಂಗ್ ಪೊಲೀಸರು ತ್ವರಿತ ತನಿಖೆ ಆರಂಭಿಸಿದ್ದು, ನಿರ್ಲಕ್ಷ್ಯದ ನರಹತ್ಯೆ ಆರೋಪದ ಮೇಲೆ ಮೂವರು ಶಂಕಿತರನ್ನು ಬಂಧಿಸಿದ್ದಾರೆ.

