ನಾಗ್ಪುರ: 2015ರಲ್ಲಿ ಸಂಭವಿಸಿದಂತೆ ಈ ವರ್ಷ ಕೂಡ ದೇಶದಲ್ಲಿ ಮಾರಣಾಂತಿಕ ಬಿಸಿಗಾಳಿ ಬೀಸುವ ಸಾಧ್ಯತೆಗಳಿವೆ ಎಂದು ಇಂಟರ್ ಗವರ್ನ್ಮೆಂಟಲ್ ಪ್ಯಾನಲ್ ಆನ್ ಕ್ಲೈಮೇಟ್ ಚೇಂಜ್ (ಐಪಿಸಿಸಿ) ಹೇಳಿದೆ.
ಐಪಿಸಿಸಿ ವರದಿ ಜಾಗತಿಕ ಮಟ್ಟದ ಅತಿ ದೊಡ್ಡ ಅವಲೋಕನ ವರದಿ ಎಂದೇ ಪ್ರಸಿದ್ಧಿ ಪಡೆದಿದ್ದು, ಕೈಗಾರಿಕಾ ಕ್ರಾಂತಿ ಅವಧಿಯ ಹಿಂದಿನ ಮಟ್ಟ (ಪ್ರಿ ಇಂಡಸ್ಟ್ರಿಯಲ್ ಲೆವಲ್) ಕ್ಕಿಂತ 2 ಡಿಗ್ರಿ ಸೆಲ್ಸಿಯಸ್ ಜಾಸ್ತಿಯಾದರೆ ಭಾರತಕ್ಕೆ ಭಾರೀ ಅಪಾಯವಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.
ಕೋಲ್ಕತಾ ಮತ್ತು ಕರಾಚಿಗೆ ಉಷ್ಣ ಅಲೆಗಳ ಅಪಾಯ ಹೆಚ್ಚಿದೆ. 2015ರಲ್ಲಿ ಸಂಭವಿಸಿದ ಮಾರಣಾಂತಿಕ ಬಿಸಿಗಾಳಿಯಂತೆ ಇಲ್ಲೂ ಮರಣಗಳ ಸಂಖ್ಯೆ ಹೆಚ್ಚಾಗುತ್ತದೆ ಎಂದು ವಿಶೇಷವಾಗಿ ತನ್ನ ವರದಿಯಲ್ಲಿ ಐಪಿಸಿ ಹೇಳಿದೆ.
ಸೋಮವಾರ ಈ ವರದಿ ಬಿಡುಗಡೆಯಾಗಿದ್ದು, ಡಿಸೆಂಬರ್ ತಿಂಗಳಲ್ಲಿ ಪೋಲೆಂಡ್‍ನಲ್ಲಿ ನಡೆಯಲಿರುವ ಕಟೋವೈಸ್ ಹವಾಮಾನ ಬದಲಾವಣೆ ಸಮಾವೇಶದಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಯಲಿದೆ. ವಿಶ್ವದಲ್ಲೇ ಅತಿ ಹೆಚ್ಚು ಇಂಗಾಲ ಹೊರಸೂಸುವ ರಾಷ್ಟ್ರಗಳಲ್ಲಿ ಒಂದಾಗಿರುವ ಭಾರತ ಈ ಜಾಗತಿಕ ಸಮ್ಮೇಳನದಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ.
2015ರಲ್ಲಿ ದೇಶವನ್ನು ಬಾಧಿಸಿದ್ದ ಬಿಸಿಗಾಳಿ ಕನಿಷ್ಠ 2,500 ಜನರನ್ನು ಬಲಿ ತೆಗೆದುಕೊಡಿತ್ತು. ಒಂದು ವೇಳೆ ಇದೇ ರೀತಿಯಲ್ಲಿ ಉಷ್ಣಾಂಶ ಹೆಚ್ಚಾದರೆ 2030- 2052ರೊಳಗೆ ತಾಪಮಾನ 1.5 ಡಿಗ್ರಿ ಸೆಲ್ಸಿಯಸ್ ತಲುಪುವ ಅಪಾಯವಿದೆ ಎಂದು ಹೇಳಿದೆ. 1.5 ಡಿಗ್ರಿ ಹೆಚ್ಚಾದರೆ ಮೆಕ್ಕೆಜೋಳ, ಭತ್ತ, ಗೋಧಿ ಇನ್ನಿತರ ಆಹಾರ ಬೆಳೆಗಳ ಉತ್ಪಾದನೆ ಕುಂಠಿತವಾಗುತ್ತದೆ.
ಸಾವಿರಾರು ವಿಜ್ಞಾನಿಗಳು ಕಳೆದ ಮೂರು ವರ್ಷಗಳಿಂದ ಅಧ್ಯಯನ ನಡೆಸಿ ಈ ವರದಿಯನ್ನು ತಯಾರಿಸಿದ್ದು ಈ ತಂಡದಲ್ಲಿ ಕೆಲಸ ಮಾಡಿದ್ದ ಜೊಯಾಶ್ರೀ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿ, ಈಗಾಗಲೇ ಜಾಗತಿಕ ತಾಪಮಾನದ ಬಿಸಿ ದೆಹಲಿ, ಮುಂಬೈ, ಕೋಲ್ಕತ್ತಾ, ಬೆಂಗಳೂರಿಗೆ ತಟ್ಟಿದೆ. ಹವಾಮಾನ ಬದಲಾವಣೆ ಭಾರತಕ್ಕೆ ತಟ್ಟಿದ್ದು, ಕೇದರನಾಥ, ಶ್ರೀನಗರ, ಚೆನ್ನೈ, ಇತ್ತೀಚಿನ ಕೇರಳವೇ ಇದಕ್ಕೆ ಉದಾಹರಣೆ. ಈಗಾಗಲೇ ಹಲವು ಕಡೆ ಬರ ಬಂದಿದೆ. ಈಗಲೇ ನಾವು ಎಚ್ಚೆತ್ತುಕೊಳ್ಳದೇ ಇದ್ದರೆ ಭವಿಷ್ಯದಲ್ಲಿ ಭಾರೀ ಅಪಾಯವಿದೆ ಎಂದು ಹೇಳಿದ್ದಾರೆ.
ಕಳೆದ ಹಣಕಾಸು ವರ್ಷದಲ್ಲಿ ಉಷ್ಣ ವಿದ್ಯುತ್ ಘಟಕದಿಂದ ಭಾರತ ವಾರ್ಷಿಕವಾಗಿ 929 ದಶಲಕ್ಷ ಟನ್ ಇಂಗಾಲದ ಡೈ ಆಕ್ಸೈಡ್ ಹೊರ ಬಿಟ್ಟಿದೆ. ದೇಶದ ಒಟ್ಟು ವಿದ್ಯುತ್ ಉತ್ಪಾದನೆಯ ಪೈಕಿ 79% ವಿದ್ಯುತ್ ಉಷ್ಣ ವಿದ್ಯುತ್ ಸ್ಥಾವರಿಂದಲೇ ಉತ್ಪಾದನೆಯಾಗುತ್ತದೆ.
ಉಷ್ಣಾಂಶ ಹೆಚ್ಚಾದ್ರೆ ಏನಾಗುತ್ತೆ?
ಜಾಗತಿಕ ತಾಪಮಾನ 2 ಡಿಗ್ರಿ ಸೆಲ್ಸಿಯಸ್ ಹೆಚ್ಚಾದ್ರೆ ಭಾರತದಲ್ಲಿ ಉಷ್ಣಾಂಶ 4 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುತ್ತದೆ. ಜಾಗತಿಕ ತಾಪಮಾನ 1.5 ಡಿಗ್ರಿ ಸೆಲ್ಸಿಯಸ್‍ನಷ್ಟು ಏರಿದ್ರೆ, ಭಾರತದಲ್ಲಿ ಉಷ್ಣಾಂಶ 3 ಡಿಗ್ರಿ ಸೆಲ್ಸಿಯಸ್‍ನ್ನಷ್ಟು ಜಾಸ್ತಿ ಆಗಲಿದೆ. ಜಾಗತಿಕ ತಾಪಮಾನ 2 ಡಿಗ್ರಿ ಸೆಲ್ಸಿಯಸ್‍ನ್ನಷ್ಟು ಹೆಚ್ಚಾದ್ರೆ ಬೇಸಿಗೆಯಲ್ಲಿ ಆರ್ಕ್ಟಿಕ್ ಮಹಾಸಾಗರದಲ್ಲಿ ಮಂಜುಗಡ್ಡೆ ಕರಗುತ್ತದೆ. ಅಷ್ಟೇ ಅಲ್ಲದೇ ಹವಳ ದ್ವೀಪಗಳೇ ಇರುವುದಿಲ್ಲ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv