ತುಮಕೂರು: ಮುಂಬರುವ ಲೋಕಸಭಾ ಚುನಾವಣೆಗಳಲ್ಲಿ ಹೊಸ ಮುಖಗಳಿಗೆ ಆದ್ಯತೆ ನೀಡಲಾಗುವುದೆಂದು ಡಿಸಿಎಂ ಜಿ. ಪರಮೇಶ್ವರ್ ತಿಳಿಸಿದ್ದಾರೆ.
ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆಯೊಂದಿಗೆ ಚುನಾವಣೆ ಎದುರಿಸಲು ನಿರ್ಧಾರವಾಗಿದೆ. ಆದರೆ ಯಾವ ಯಾವ ಕ್ಷೇತ್ರಗಳಲ್ಲಿ ಮೈತ್ರಿ ಮುಂದುವರಿಯುತ್ತದೆ ಎಂದು ಸ್ಪಷ್ಟವಾಗಿಲ್ಲ. ಮುಂದಿನ ದಿನಗಳಲ್ಲಿ ಹೈಕಮಾಂಡ್ ಜೊತೆ ಚರ್ಚಿಸಿ ನಿರ್ಧರಿಸಲಾಗುತ್ತದೆ ಎಂದು ತಿಳಿಸಿದರು.
ಈ ಬಾರಿಯ ಲೋಕಸಭಾ ಚುನಾವಣೆಗಳಲ್ಲಿ ಯುವಕರು ಹಾಗೂ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲು ಎಐಸಿಸಿ ಅಧ್ಯಕ್ಷರಾದ ರಾಹುಲ್ ಗಾಂಧಿಯವರು ಈಗಾಗಲೇ ಸೂಚಿಸಿದ್ದಾರೆ ಎಂದು ಹೇಳುವ ಮೂಲಕ ಟಿಕೆಟ್ ವಿಚಾರದಲ್ಲಿ ಹಾಲಿ ಸಂಸದರಿಗೆ ಪರೋಕ್ಷವಾದ ಎಚ್ಚರಿಕೆಯನ್ನು ಡಿಸಿಎಂ ನೀಡಿದರು.
ಸರ್ಕಾರ ಉಸ್ತುವಾರಿ ನೇಮಕ ಹಾಗೂ ಸಾಲಮನ್ನಾ ವಿಚಾರದಲ್ಲಿ ಕಾಲ ಕಳೆಯುತ್ತದೆಂದು ಆರೋಪಿಸಿದ್ದ ಬಿಎಸ್‍ವೈ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪನವರು ನೀಡೋ ಸರ್ಟಿಫೀಕೆಟ್ ನಮಗೆ ಬೇಕಿಲ್ಲ. ಮೊದಲು ಅವರು ತಮ್ಮ ಹಿಂದಿನ ಅವಧಿಯನ್ನು ತಿರುಗಿ ನೋಡಿಕೊಳ್ಳಲು ಎಂದು ತಿರುಗೇಟು ನೀಡಿದರು.
ಪಕ್ಷದಲ್ಲಿನ ಉಸ್ತುವಾರಿ ನೇಮಕ ಅಸಮಾಧಾನ ವಿಚಾರ ಕುರಿತು ಪ್ರತಿಕ್ರಿಯಿಸಿ, ಸಮನ್ವಯ ಸಮಿತಿಯಲ್ಲಿ ಈ ವಿಚಾರ ಚರ್ಚೆ ನಡೆಯಬೇಕೆಂದೇನಿಲ್ಲ. ಎರಡು ಪಕ್ಷದ ಪ್ರಮುಖ ಮುಖಂಡರುಗಳ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು. ಜನರ ಒಳಿತಿಗಾಗಿ ಸಮ್ಮಿಶ್ರ ಸರ್ಕಾರ ರಚನೆಯಾಗಿರುವುದಾಗಿ ಅವರು ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews