ಬಾಗಲಕೋಟೆ: ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡಲು ಕೈ ನಾಯಕರು ಹಿಂದೇಟು ಹಾಕುತ್ತಿರುವುದರಿಂದ ಡಿಸಿಎಂ ಪರಮೇಶ್ವರ್ ಅಸಮಾಧಾನಗೊಂಡಿದ್ದು, ಅಲ್ಲದೇ ಅಂತವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಆಪ್ತರ ಬಳಿ ಮಾತನಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಹೌದು, ಜಮಖಂಡಿ ಉಪಚುನಾವಣೆಯಲ್ಲಿ ಕೈ ಪಡೆ ಶತಾಯಗತಾಯ ಗೆಲುವು ಸಾಧಿಸಲೇಬೇಕೆಂದು ಹರಸಾಹಸ ಪಡುತ್ತಿದೆ. ಆದರೆ ಅಭ್ಯರ್ಥಿ ಪರ ಪ್ರಚಾರ ಮಾಡಲು ಪಕ್ಷದ ಪ್ರಮುಖರೇ ನಿರಾಸಕ್ತಿ ತೋರುತ್ತಿದ್ದಾರೆ. ಅಲ್ಲದೇ ಹಾಲಿ, ಮಾಜಿ ಸಚಿವರು ಹಾಗೂ ಶಾಸಕರು ಸಹ ಪ್ರಚಾರಕ್ಕೆ ಬರುತ್ತಿಲ್ಲ.
Advertisement
Advertisement
ಸಚಿವರು ಮತ್ತು ಶಾಸಕರ ನಡೆಯಿಂದ ಡಿಸಿಎಂ ಅಸಮಾಧಾನಗೊಂಡಿದ್ದು, ಪ್ರಚಾರಕ್ಕೆ ಬಾರದೇ ಇರುವ ನಾಯಕರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಆಪ್ತರ ಬಳಿ ಮಾತನಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
Advertisement
ಹಾಲಿ ಸಚಿವರಾದ ಯು ಟಿ ಖಾದರ್, ಜಮೀರ್ ಅಹ್ಮದ್ ಸಚಿವ ಹಾಗೂ ಮಾಜಿ ಸಚಿವರಾಗಿದ್ದ ಎಸ್ ಆರ್ ಪಾಟೀಲ್, ವಿನಯ್ ಕುಲಕರ್ಣಿ ಹಾಗೂ ವೀರಕುಮಾರ್ ಪಾಟೀಲ್. ಶಾಸಕರಾದ ಹುಬ್ಬಳ್ಳಿ ಪೂರ್ವ ಕ್ಷೇತ್ರದ ಪ್ರಸಾದ ಅಬ್ಬಯ್ಯ, ರೂಪಾ ಶಶಿಧರ್, ಬೈಲಹೊಂಗಲ ಮಾಂತೇಶ್ ಕೌಜಲಗಿ, ಶಿವರಾಮ ಹೆಬ್ಬಾರ್, ಇಂಡಿ ಕ್ಷೇತ್ರದ ಯಶವಂತರಾವ್ ಪಾಟೀಲ್ ಹಾಗೂ ಹುಕ್ಕೇರಿ ಶಾಸಕ/ಮುಖ್ಯ ಸಚೇತಕರಾದ ಗಣೇಶ್ ಹಾಗೂ ಮಾಜಿ ಶಾಸಕರಾದ ಸಿಎಸ್ ನಾಡಗೌಡ, ಎಸ್.ಜಿ. ನಂಜಯ್ಯನಮಠ, ಹಂಪನಗೌಡ ಬಾದರ್ಲಿ ಹಾಗೂ ಹುನಗುಂದದ ವಿಜಯಾನಂದ ಕಾಶಪ್ಪನವರ್ ಸಹ ಪ್ರಚಾರದಿಂದ ಗೈರಾಗಿದ್ದಾರೆ.
Advertisement
ಇವರಲ್ಲದೇ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ವೀಣಾ ಕಾಶಪ್ಪನವರು ಹಾಗೂ ವಿಧಾನಪರಿಷತ್ ಸದಸ್ಯರಾದ ವಿವೇಕ್‍ರಾವ್ ಪಾಟೀಲ್ ಹಾಗೂ ಸುನೀಲ್ ಗೌಡ ಪಾಟೀಲ್ ಸಹ ಪ್ರಚಾರಕ್ಕೆ ಆಗಮಿಸಿಲ್ಲ.
ಈ ಮೇಲ್ಕಂಡ ಕೈ ಮುಖಂಡರು ಅಕ್ಟೋಬರ್ 22 ರಿಂದ ಜಮಖಂಡಿ ಕ್ಷೇತ್ರದಲ್ಲಿ ಪ್ರಚಾರ ಮಾಡಬೇಕಿತ್ತು. ಅಲ್ಲದೇ ಕಾಂಗ್ರೆಸ್ ಜಿಲ್ಲಾ ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಮಟ್ಟದಲ್ಲಿ ನಾಯಕರಿಗೆ ಉಸ್ತುವಾರಿಯನ್ನು ನೀಡಿತ್ತು. ಸಮುದಾಯವಾರು ಮತ ಸೆಳೆಯಲು, ಜಾತಿಯಾಧಾರದ ಮೇಲೆ ಕಾಂಗ್ರೆಸ್ ಮುಖಂಡರನ್ನು ನೇಮಿಸಿತ್ತು.
ಕಳೆದ ಬಾರಿಯ ವಿಧಾನಸಭಾ ಚುನವಾಣೆಯಲ್ಲಿ ಕೈ ತಪ್ಪಿದ್ದ ಮತಗಳನ್ನು ಸೆಳೆಯಲು ಕಾಂಗ್ರೆಸ್ ರಣತಂತ್ರ ಹೆಣೆದಿತ್ತು. ಅಲ್ಲದೇ ಜಾತಿವಾರು ಮತಗಳನ್ನು ಸೆಳೆಯಲು ಆಯಾ ಸಮುದಾಯದ ಮುಖಂಡರನ್ನೇ ನೇಮಿಸಿತ್ತು. ಇದರ ಮೂಲಕ ಕಡಿಮೆ ಮತ ಬಿದ್ದ ಭಾಗದಲ್ಲಿ ಮತ ಕ್ರೋಢೀಕರಣ ಮಾಡುವ ಜವಬ್ದಾರಿಯನ್ನು ಪಕ್ಷದ ಪ್ರಮುಖ ನಾಯಕರಿಗೆ ನೀಡಿತ್ತು.
ಪ್ರಚಾರಕ್ಕೆ ಗೈರಾಗಿ ಕಾಂಗ್ರೆಸ್ಸಿನ ರಣತಂತ್ರಕ್ಕೆ ಸ್ವ-ಪಕ್ಷೀಯರೇ ಬೆಂಬಲ ಸೂಚಿಸಿಲ್ಲದ್ದರಿಂದ ಡಿಸಿಎಂ ಪರಮೇಶ್ವರ್ ಎಲ್ಲಾ ಮುಖಂಡರ ಮೇಲೆ ಅಸಮಾಧಾನಗೊಂಡಿದ್ದಾರೆ. ಅಲ್ಲದೇ ಈ ಬಗ್ಗೆ ಕೆಪಿಸಿಸಿಗೆ ದೂರನ್ನು ನೀಡಿ, ಮುಂಬರುವ ಚುನಾವಣೆಯ ಟಿಕೆಟ್ ಹಂಚಿಕೆ ವೇಳೆ ಈ ಬಗ್ಗೆ ಸರಿಯಾದ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv