ತುಮಕೂರು: ಇಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದ್ದು, ಡಿ.ಸಿ.ಎಂ ಜಿ.ಪರಮೇಶ್ವರ್, ದಿನೇಶ್ ಗುಂಡೂರಾವ್, ಸಚಿವ ಎಸ್.ಆರ್.ಶ್ರೀನಿವಾಸ್ ಸೇರಿದಂತೆ ಜೆ.ಡಿ.ಎಸ್. ಮುಖಂಡರು ನಾಮಪತ್ರ ವಾಪಸ್ ತೆಗೆದುಕೊಳ್ಳುವಂತೆ ಮುದ್ದಹನುಮೇಗೌಡರ ಮನವೊಲಿಸುವ ಪ್ರಯತ್ನ ಮಾಡಿದ್ದರು.
ಮುದ್ದಹನುಮೇಗೌರ ಜೊತೆ ಚರ್ಚೆ ಮಾಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ದಿನೇಶ್ ಗುಂಡೂರಾವ್, ನಮ್ಮ ಅಧ್ಯಕ್ಷರು ನಿರ್ದೇಶನ ನೀಡಿದ್ದರು. ಅದರ ಪ್ರಯುಕ್ತ ನಾವು ಬಂದು ಇವತ್ತು ಮುದ್ದಹನುಮೇಗೌಡ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಅವರು ಪಾರ್ಲಿಮೆಂಟ್ ಸದಸ್ಯರಾಗಿ ಪಕ್ಷದ ಒಬ್ಬ ಪ್ರಾಮಾಣಿಕ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಕೆಲಸವನ್ನು ನಿಷ್ಠೆಯಿಂದ ಮಾಡುವಂತಹ ಜನಪರ ನಾಯಕರಾಗಿದ್ದಾರೆ. ಮೈತ್ರಿ ಸರ್ಕಾರದಿಂದ, ನಮ್ಮ ಪಕ್ಷದ ನಾಯಕರಿಂದಲೇ ಅವರಿಗೆ ಅನ್ಯಾಯವಾಗಿದೆ ಎಂದು ನಾನೇ ಹೇಳಿದ್ದೇನೆ ಎಂದರು.
Advertisement
Advertisement
ಇಂತಹ ತೀರ್ಮಾನವಾದಾಗ ನಮ್ಮೆಲ್ಲರಿಗೂ ನೋವಾಗುತ್ತದೆ. ರಾಜಕೀಯ ಬೆಳವಣಿಗೆಯಲ್ಲಿ ಇಂತಹ ಘಟನೆಗಳು ಆಗುವುದನ್ನು ಇತಿಹಾಸದಲ್ಲಿ ನೋಡಿದ್ದೇವೆ. ಪಕ್ಷದ ನಾಯಕರೆಲ್ಲರೂ ಸೇರಿ ಚರ್ಚೆ ಮಾಡಿ ಅವರನ್ನು ಗೌರವಯುತವಾಗಿ ನೋಡಿಕೊಳ್ಳುತ್ತೇವೆ ಎಂಬ ಭರವಸೆ ಕೊಟ್ಟಿದ್ದೇನೆ. ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡೋಣ ಎಂದು ಪಕ್ಷದ ಪರವಾಗಿ ನಾವು ಮನವಿ ಮಾಡಿಕೊಂಡಿದ್ದೇವೆ. ಅವರಿಗೆ ಎಷ್ಟೆ ನೋವಿದ್ದರೂ ನಮ್ಮನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ಹೀಗಾಗಿ ಒಳ್ಳೆಯ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Advertisement
Advertisement
ಮೈತ್ರಿಯಿಂದ ಈ ಚುನಾವಣೆಯನ್ನು ಎದುರಿಸುತ್ತಿದ್ದೇವೆ. ತುಮಕೂರು ಕ್ಷೇತ್ರವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಡಬೇಕಿತ್ತು. ಆಗ ಮುದ್ದೆಹನುಮೇಗೌಡರು ಸಾಮಾನ್ಯ ಶಾಸಕರಾಗಿ ಸತತ 5 ವರ್ಷ ಸೇವೆ ಮಾಡಿಕೊಂಡು ಬಂದಿದ್ದರು. ಈಗ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಅವರುಕಾರ್ಯಕರ್ತರ ಮಾತಿಗೆ ಮಣಿದು ನಾಮಪತ್ರ ಸಲ್ಲಿಸಿದ್ದರು. ನಾವು ಮನವೊಲಿಸುವ ಪ್ರಯತ್ನ ಮಾಡಿದ್ದೇವೆ. ಇಂದು ನಾವು ಅವರ ಮನೆಗೆ ಬಂದಾಗ ಪ್ರೀತಿ-ಗೌರವದಿಂದ ಕಂಡಿದ್ದಾರೆ. ನೀವು ಪಕ್ಷಕ್ಕಾಗಿ ನಾಮಪತ್ರ ವಾಪಸ್ ತೆಗೆದುಕೊಳ್ಳಿ ಎಂದು ಅವರಲ್ಲಿ ಮನವಿ ಮಾಡಿಕೊಂಡಿದ್ದೇವೆ. ಅದಕ್ಕೆ ಅವರು ನಮ್ಮ ಕಾರ್ಯಕರ್ತರ ಜೊತೆ ಮಾತನಾಡಿ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ. ಜೊತೆಗೆ ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷಕ್ಕೆ ಮುಜುಗರವುಂಟು ಮಾಡುವುದಿಲ್ಲ ಎಂದು ಹೇಳಿದ್ದಾರೆ. ನನಗೆ ಅವರ ಮೇಲೆ ವಿಶ್ವಾಸ ಇದೆ ಎಂದು ಡಿಸಿಎಂ ಪರಮೇಶ್ವರ್ ತಿಳಿಸಿದರು.