– ಡಿಕೆಶಿ, ಎಚ್‍ಡಿಕೆ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಚಿಕ್ಕಬಳ್ಳಾಪುರ: ಸುಳ್ಳು ಆರೋಪ ಮಾಡುವುದರಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಎತ್ತಿದ ಕೈ ಎಂದು ಉಪ ಮುಖ್ಯಮಂತ್ರಿ ಗೋವಿಂದ್ ಕಾರಜೋಳ ಹೇಳಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಚುನಾವಣಾ ಪ್ರಚಾರ ಕೈಗೊಂಡು ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿ ಡಾ ಕೆ.ಸುಧಾಕರ್ ಒಳ್ಳೆಯ ಅಭ್ಯರ್ಥಿ. ಅವರು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನ ಮಾಡಿದ್ದಾರೆ. ಮೆಡಿಕಲ್ ಕಾಲೇಜಿಗೆ ಶಂಕುಸ್ಥಾಪನೆ ಮಾಡಿಸಿದ್ದು, ಈಗಾಗಲೇ ಕಾಮಗಾರಿ ಸಹ ಆರಂಭವಾಗಿದೆ. ಮಂಚೇನಹಳ್ಳಿ ತಾಲೂಕು ಘೋಷಣೆ ಮಾಡಿಸಿ ಜನರ ಆಸೆ ಈಡೇರಿಸಿದ್ದಾರೆ. ಇದು ಸುಧಾಕರ್ ಜೀವನದ ದೊಡ್ಡ ಸಾಧನೆ ಎಂದು ಹಾಡಿ ಹೊಗಳಿದರು.
Advertisement
Advertisement
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಹತಾಶರಾಗಿ ಏನೇನೋ ಆರೋಪಗಳನ್ನ ಮಾಡುತ್ತಿದ್ದಾರೆ. ಕಾಂಗ್ರೆಸ್‍ನವರು ಸಹ ಸುಳ್ಳು ಆರೋಪಗಳನ್ನ ಮಾಡುತ್ತಿದ್ದಾರೆ. ಆದರೆ ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಆಯ್ತು. ಕಾಂಗ್ರೆಸ್-ಜೆಡಿಎಸ್‍ನವರು ಸಾಧನೆ ಪಟ್ಟಿ ಹಿಡಿದು ಜನರ ಬಳಿ ಹೋಗುವಂತೆ ಅವರಿಗೆ ಹೇಳುತ್ತೇನೆ ಎಂದರು.
Advertisement
ಅನರ್ಹ ಶಾಸಕ ಕೆ.ಸುಧಾಕರ್ ರಾಜೀನಾಮೆ ಕೊಟ್ಟಿದ್ದು ಆಸೆ, ಆಮಿಷಗಳಿಗಲ್ಲ. ಕ್ಷೇತ್ರದ ಅಭಿವೃದ್ಧಿಯ ಉದ್ದೇಶದಿಂದ ರಾಜೀನಾಮೆ ನೀಡಿ, ತ್ಯಾಗ ಮೆರೆದಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಸುಳ್ಳು ಆರೋಪಗಳಿಂದಲೇ ಜೀವನ ಮಾಡಿದವರು. ಪ್ರಾದೇಶಿಕ ಪಕ್ಷ ಜೆಡಿಎಸ್ ಮೈಸೂರು ಭಾಗಕ್ಕೆ ಮಾತ್ರ ಸೀಮಿತವಾಗಿದೆ ಎಂದು ಕುಟುಕಿದರು.
Advertisement
ಡಿಕೆಶಿಗೆ ಸಿ.ಟಿ.ರವಿ ತಿರುಗೇಟು:
ಚಿಕ್ಕಬಳ್ಳಾಪುರದಲ್ಲಿ ಪತ್ರಕರ್ತರ ಭವನದಲ್ಲಿ ಮಾತನಾಡಿದ ಸಚಿವ ಸಿ.ಟಿ.ರವಿ, ಚಿಕ್ಕಬಳ್ಳಾಪುರದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ನನ್ನ ವಿರೋಧವಿಲ್ಲ ಎಂಬ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿಗೆ ತಿರುಗೇಟು ನೀಡಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಮೆಡಿಕಲ್ ಕಾಲೇಜು ಆರಂಭಕ್ಕೆ ಅಡ್ಡಿಪಡಿಸುವುದಿಲ್ಲ ಎನ್ನುವುದಾದರೆ ಸುಧಾಕರ್ ಅವರೊಂದಿಗೆ ಯಾಕೆ ವಾಕ್ಸಮರ ನಡೆಸುತ್ತಿದ್ದಾರೆ? ಮೆಡಿಕಲ್ ಕಾಲೇಜು ಆರಂಭಿಸುತ್ತಿರುವುದು ಕಮಿಷನ್‍ಗಾಗಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಕುಮಾರಸ್ವಾಮಿ ಅವರು ಅಧಿಕಾರದಲ್ಲಿದ್ದಾಗ ವಿಧಾನಸೌಧದಲ್ಲಿ ನಡೆಸಬೇಕಿದ್ದ ಆಡಳಿತವನ್ನ ತಾಜ್ ವೆಸ್ಟೆಂಡ್ ಹೋಟೆಲ್‍ಗೆ ತೆಗೆದುಕೊಂಡು ಹೋಗಿದ್ದರು. ಹಾಗಾದರೆ ಅವರು ರಾಜಕೀಯ ದಲ್ಲಾಳಿಗಳ ಅನುಕೂಲಕ್ಕಾಗಿ ಆ ರೀತಿ ಮಾಡಿದ್ರಾ ಎಂದು ಪ್ರಶ್ನಿಸಿದರು.
ಬಡವರ ಕಷ್ಟ ತಾಜ್ ವೆಸ್ಟೆಂಡ್ ಹೋಟೆಲ್‍ನಲ್ಲಿ ನಿದ್ದೆ ಮಾಡುವವರಿಗೆ, ಹೆಲಿಕಾಪ್ಟರ್ ನಲ್ಲಿ ಓಡಾಡುವ ಶ್ರೀಮಂತರಿಗೆ ಅರ್ಥವಾಗಲ್ಲ ಎಂದು ಸಚಿವರು ಕಾಂಗ್ರೆಸ್-ಜೆಡಿಎಸ್ ನಾಯಕರ ವಿರುದ್ಧ ಗುಡುಗಿದರು.