ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗಲ್ಲ: ಡಿ.ಕೆ.ಶಿವಕುಮಾರ್

Public TV
2 Min Read
d.k.shivakumar chamundi hills

– ಆಷಾಢ ಶುಕ್ರವಾರ; ಚಾಮುಂಡಿ ಬೆಟ್ಟದಲ್ಲಿ ಡಿಕೆಶಿ ವಿಶೇಷ ಪೂಜೆ

ಮೈಸೂರು: ಆಷಾಢ ಶುಕ್ರವಾರದ (Ashada) ಪ್ರಯುಕ್ತ ಚಾಮುಂಡಿ ಬೆಟ್ಟಕ್ಕೆ ತೆರಳಿ ಡಿಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ಚಾಮುಂಡಿ ತಾಯಿಗೆ (Chamundi Hills) ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಶುಕ್ರವಾರ ಬೆಟ್ಟಕ್ಕೆ ತೆರಳಿದ ಡಿಸಿಎಂ ಈಡುಗಾಯಿ ಒಡೆದು ಪ್ರಾರ್ಥಿಸಿದರು. ಈ ವೇಳೆ ಮಂತ್ರ ಪಠಣ ಕೂಡ ಮಾಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರಿಗೂ ಒಳ್ಳೆಯದು ಮಾಡು ಎಂದು ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: 2ನೇ ಆಷಾಢ ಶುಕ್ರವಾರ – ಲಕ್ಷ್ಮಿ ಅಲಂಕಾರದಲ್ಲಿ ಕಂಗೊಳಿಸುತ್ತಿರುವ ಚಾಮುಂಡಿ ತಾಯಿ

ದುಃಖವನ್ನು ದೂರು ಮಾಡುವ ದೇವಿ ಚಾಮುಂಡಿ. ಈ ಬಾರಿ ಇಡೀ ರಾಜ್ಯದಲ್ಲಿ ಒಳ್ಳೆಯ ಮಳೆಯಾಗಿದೆ. ಎಲ್ಲರಿಗೂ ಒಳ್ಳೆಯದನ್ನು ಮಾಡಲೆಂದು ಪ್ರಾರ್ಥನೆ ಮಾಡಿದ್ದೇನೆ. ಪ್ರಯತ್ನಕ್ಕಿಂತ ಪ್ರಾರ್ಥನೆಯಿಂದ ಫಲ ಸಿಗುತ್ತದೆ ಎಂಬ ನಂಬಿಕೆ ಇದೆ. ಇಡೀ ರಾಜ್ಯಕ್ಕೆ ಏನೇ ಕೆಲಸ ಮಾಡಬೇಕಾದರೂ ತಾಯಿಗೆ ಪೂಜೆ ಸಲ್ಲಿಸಿ ಮಾಡುತ್ತೇವೆ. ಇಂದು ಕುಟುಂಬ ಸಮೇತ ಬಂದು ತಾಯಿಗೆ ಪೂಜೆ ಸಲ್ಲಿಸಿದ್ದೇನೆ ಎಂದು ಹೇಳಿದ್ದಾರೆ.

ನಿಮ್ಮ ಪ್ರಾರ್ಥನೆಗೆ ಫಲ ಸಿಗುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗುವುದಿಲ್ಲ ಎಂಬುದು ನನ್ನ ನಂಬಿಕೆ. ನನಗೆ ಏನು ಬೇಕೋ ಅದನ್ನು ಪ್ರಾರ್ಥನೆ ಮಾಡಿದ್ದೇನೆ. ಯಾವ ಚರ್ಚೆಯೂ ಬೇಡ ಈಗ ಎಂದು ಸಿಎಂ ರೇಸ್ ವಿಚಾರಕ್ಕೆ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ತಾಯಿ ಚಾಮುಂಡಿ ದರ್ಶನ ಪಡೆದ ನಟ ದರ್ಶನ್

ರಾಜಕೀಯದ ಬಗ್ಗೆ ಮಾತನಾಡುವುದಿಲ್ಲ. ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರು ಹಾಗೂ ಹಿರಿಯರು. ಅವರು ಬುದ್ಧಿವಾದ ಹೇಳಿ ಸಂದೇಶ ಕೊಟ್ಟಿದ್ದಾರೆ. ಎಲ್ಲರೂ ಸೇರಿ ಒಟ್ಟಾಗಿ ಕೆಲಸ ಮಾಡೋಣ ಎಂದಷ್ಟೇ ಹೇಳಿ ಡಿಕೆಶಿ ಹೊರಟರು.

Share This Article