ರಾಮನಗರ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಯವರ ಒತ್ತಾಯ ಹಾಗೂ ರೈತರ ಹಿತದೃಷ್ಟಿಯಿಂದ ರಾಮನಗರ ಜಿಲ್ಲೆಯ ರೇಷ್ಮೆ ಮಾರುಕಟ್ಟೆಗಳನ್ನು ತೆರೆದು ವಹಿವಾಟು ನಡೆಸಲು ಸರ್ಕಾರ ಹಾಗೂ ರೇಷ್ಮೆ ಸಚಿವರು ಆದೇಶಿಸಿದ್ದಾರೆ ಎಂದು ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಸ್ಪಷ್ಟಪಡಿಸಿದ್ದಾರೆ.
ಕೊರೊನಾ ತಡೆಗೆ ರಾಮನಗರ ಜಿಲ್ಲಾಡಳಿತ ತೆಗೆದುಕೊಂಡಿರುವ ಮುಂಜಾಗ್ರತಾ ಕ್ರಮವನ್ನು ಪರಿಶೀಲನೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿದರು. ಅಲ್ಲದೆ ಕೋವಿಡ್-19 ಐಸೋಲೇಷನ್ ವಾರ್ಡ್ ಗೆ ಭೇಟಿ ನೀಡಿ ಪರಿಶೀಲಿಸಿದರು.
Advertisement
Advertisement
ನಂತರ ಮಾತನಾಡಿದ ಅವರು, ಕೋವಿಡ್- 19 ವಿಚಾರದಲ್ಲಿ ಈಗಾಗಲೇ ಜಿಲ್ಲಾಡಳಿತ ಪೂರ್ವಭಾವಿ ತಯಾರಿ ನಡೆಸಿದೆ. ಇನ್ನೂ ಹೆಚ್ಚು ನಿಯಂತ್ರಣ ಮಾಡಲು ಮುನ್ನೆಚರಿಕಾ ದೃಷ್ಟಿಯಿಂದ ರೇಷ್ಮೆ ಮಾರುಕಟ್ಟೆಯನ್ನು ಮೂರು ಕಡೆ ವಿಸ್ತರಿಸಲಾಗುವುದು. ರೈತರಿಗೆ ಫಿವರ್ ಪರೀಕ್ಷೆ, ಮಾಸ್ಕ್ ಹಾಕಿ ಬರುವಂತೆ ಸೂಚನೆ ನೀಡಲಾಗಿದೆ. ರೋಗದ ಲಕ್ಷಣಗಳ ಬಗ್ಗೆ ಕ್ರಮ ವಹಿಸುವಂತೆ ಸೂಚಿಸಲಾಗಿದೆ. ಇಡೀ ತಿಂಗಳ ಪೂರ್ತಿ ಮೂರು ಕಡೆ ರೇಷ್ಮೆ ಮಾರುಕಟ್ಟೆ ನಡೆಯಲಿದೆ ಎಂದು ತಿಳಿಸಿದರು.
Advertisement
Advertisement
ಮುಂದಿನ ಮೂರು ತಿಂಗಳ ಕಾಲ ನಮ್ಮ ಹುಷಾರಿನಲ್ಲಿ ನಾವು ಇರಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸಹ ಎಚ್ಚರದಿಂದ ಕಾರ್ಯನಿರ್ವಹಿಸುತ್ತಿವೆ. ಜಿಲ್ಲೆಯ ಎಲ್ಲರಿಗೂ ಮಾಸ್ಕ್ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ನಾಲ್ಕು ತಿಂಗಳು ಮಾಸ್ಕ್ ಧರಿಸುವಂತೆ ಸೂಚಿಸಲಾಗಿದೆ. ಕಂಟ್ರೋಲ್ ರೂಂ ಮೂಲಕ ಮಾಹಿತಿ ಪಡೆಯುವ ಕೆಲಸವೂ ನಾಲ್ಕು ತಿಂಗಳ ಕಾಲ ನಡೆಯಲಿದೆ. ಔಷಧಿ ಸಿಂಪಡಣೆ ವಾಹನಗಳು ಪ್ರಸ್ತುತ ಎರಡಿದ್ದು, ಅವುಗಳನ್ನು ಐದಕ್ಕೆ ಹೆಚ್ಚಿಸಲಾಗುವುದು. ಜನ ಸಂದಣಿ ಪ್ರದೇಶಗಳಲ್ಲಿ ನಿತ್ಯ ಔಷಧ ಸಿಂಪಡಿಸಲಾಗುವುದು ಎಂದರು.
ಜಿಲ್ಲೆಯ ಹಳೆ ಕಂದಾಯ ಭವನದಲ್ಲಿ ನಿರ್ಮಿಸಿರುವ ಕೋವಿಡ್-19 ಆಸ್ಪತ್ರೆಯಲ್ಲಿ ಸದ್ಯ ನೂರು ಹಾಸಿಗೆ ವ್ಯವಸ್ಥೆ ಇದೆ. 200 ಹಾಸಿಗೆಗಳಿಗೆ ವಿಸ್ತರಿಸುವುದರ ಜೊತೆಗೆ ಅಗತ್ಯ ಕ್ರಮ ಕೈಗೊಳ್ಳುವದಲ್ಲದೇ 10 ವೆಂಟಿಲೇಟರ್ ಗಳ ವ್ಯವಸ್ಥೆ ಹಾಗೂ ಪಿಪಿ ಕಿಟ್, ಮಾಸ್ಕ್, ಸೇರಿದಂತೆ ಎಲ್ಲವನ್ನೂ ನೀಡಲಾಗುವುದು.
ರೇಷ್ಮೆ ಮಾರುಕಟ್ಟೆ ಸಂಬಂಧ ಮೊದಲೇ ಎಚ್ಚೆತ್ತುಕೊಳ್ಳಬೇಕಿತ್ತು. ಎರಡು ದಿನ ಮುನ್ನವೇ ಮೂರು ಕಡೆ ಮಾರಾಟಕ್ಕೆ ಅವಕಾಶ ನೀಡಬೇಕಿತ್ತು. ಭಾನುವಾರದಿಂದ ಮೂರು ಕಡೆ ರೇಷ್ಮೆ ಮಾರುಕಟ್ಟೆಗೆ ಅವಕಾಶ ನೀಡಲಾಗುವುದು. ಅಲ್ಲದೆ ಜಿಲ್ಲೆಯಲ್ಲಿ ಒಟ್ಟು ಮೂರು ಮಾವು ಮಾರುಕಟ್ಟೆ ತೆರೆಯಲಾಗುವುದು. ಖಾಸಗಿ ಕಂಪನಿಯು ಇದಕ್ಕೆ ಉತ್ಸಕತೆ ತೋರಿದೆ. ಹೀಗಾಗಿ ಮುನ್ನೆಚರಿಕಾ ಕ್ರಮ ವಹಿಸಿಯೇ, ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದರು.