ಮೈಸೂರು: ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಅವರು ಮೈಸೂರಿಗೆ ಭೇಟಿಕೊಟ್ಟಿದ್ದು, ತಿಹಾರ್ ಜೈಲು ಸೇರಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಹಾಗೂ ಮಾಜಿ ಡಿಸಿಎಂ ಡಾ. ಜಿ ಪರಮೇಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
ಡಿಕೆಶಿ ಅವರು ಕೆಲವು ತಪ್ಪುಗಳನ್ನು ಮಾಡಿರುವುದನ್ನು ತಮ್ಮ ಬಳಿ ಒಪ್ಪಿಕೊಂಡಿದ್ದಾರೆ ಎಂದು ಪರಮೇಶ್ವರ್ ಅವರು ಹೇಳಿಕೆ ಕೊಟ್ಟಿದ್ದರು. ಈ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ಡಿಸಿಎಂ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಈ ಬಗ್ಗೆ ಹೇಳಿದರೆ ಅದು ಬೇರೆ ಅರ್ಥವನ್ನು ಕಲ್ಪಿಸುತ್ತದೆ. ಡಿಕೆಶಿ ಅವರ ವಿಚಾರ ಕಾನೂನಿನಲ್ಲಿ ಬೇರೆ ಬೇರೆ ಹಂತ ತಲುಪಿದೆ. ಈ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣ ಇರುವ ಹಿನ್ನೆಲೆಯಲ್ಲಿ ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದು ಹೊರಟು ಹೋದರು.
ಇದೇ ವೇಳೆ ಕಾರ್ಯಕರ್ತರು ತಮ್ಮ ಫ್ಲೆಕ್ಸ್ ಹಾಕಿದ ವಿಚಾರವಾಗಿ ಪ್ರತಿಕ್ರಿಯಿಸಿ, ಈ ಬಗ್ಗೆ ಅಗತ್ಯ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ. ಈ ಕೂಡಲೇ ಫ್ಲೆಕ್ಸ್ ತೆರವುಗೊಳಿಸಲು ಹೇಳಿದ್ದೇನೆ ಎಂದು ತಿಳಿಸಿದರು.
ಹಾಗೆಯೇ ನೆರೆ ಪರಿಹಾರ ವಿಚಾರ ಕಾಂಗ್ರೆಸ್ ಪ್ರತಿಭಟನೆ ಬಗ್ಗೆ ಮಾತನಾಡಿ, ಪ್ರತಿಪಕ್ಷದಿಂದ ರಾಜಕೀಯ ಮಾಡುವ ಯತ್ನವಾಗುತ್ತಿದೆ. ಈ ಹಿಂದಿನ ಸರ್ಕಾರ ಜನಪರ ಕೆಲಸ ಮಾಡಿಲ್ಲ. ಆದರೆ ನಾವು ಜನ ಪರ ಕೆಲಸ ಮಾಡುತ್ತಿದ್ದೇವೆ. ಪೂರ್ಣ ಪ್ರಮಾಣದ ಸಚಿವ ಸಂಪುಟ ಇದ್ದರೆ ಒಳ್ಳೆಯದು. ಆದರೆ ಇದರಿಂದ ಅಭಿವೃದ್ಧಿಗೆ ಯಾವುದೇ ಹಿನ್ನೆಡೆ ಆಗಿಲ್ಲ. ಆದಷ್ಟು ಬೇಗ ಪೂರ್ಣ ಪ್ರಮಾಣದ ಸಚಿವ ಸಂಪುಟ ಆಗಲಿದೆ ಎಂದು ಹೇಳಿದರು.
ಬಳ್ಳಾರಿ ಪ್ರತ್ಯೇಕ ಜಿಲ್ಲೆ ಪರ ಅಶ್ವಥ್ ನಾರಾಯಣ್ ಬ್ಯಾಟಿಂಗ್ ಮಾಡಿದರು. ಇದರಿಂದ ಒಳ್ಳೆಯದಾಗುವುದಾರೆ ಆಗಲಿ. ಅಭಿವೃದ್ದಿ ದೃಷ್ಠಿಯಿಂದ ಬೆಳಗಾವಿ ಸೇರಿದಂತೆ ಯಾವುದೇ ಪ್ರತ್ಯೇಕ ಜಿಲ್ಲೆ ಆಗುವುದಾದರೆ ಆಗಲಿ. ಅಭಿವೃದ್ಧಿ ದೃಷ್ಟಿಯಿಂದ ಈ ಬಗ್ಗೆ ಮುಂದೆ ಸರ್ಕಾರ ನಿರ್ಧರಿಸುತ್ತದೆ ಎಂದರು.