ಶಿವಮೊಗ್ಗ/ ಬೆಂಗಳೂರು: ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (DCC Bank Shivamogga) ಹಗರಣ ಪ್ರಕರಣದಲ್ಲಿ ಬ್ಯಾಂಕ್‍ನ ಮಾಜಿ ಅಧ್ಯಕ್ಷ ಮಂಜುನಾಥ್ ಅವರನ್ನು ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಬಂಧಿಸಿದ್ದಾರೆ.
ಮಂಗಳವಾರ (ಏ.8) ಮಂಜುನಾಥ್ ಅವರ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲಿಸಿದ್ದರು. ಅವರ ನಿವಾಸ ಸೇರಿದಂತೆ 8 ಕಡೆ ಇಡಿ ದಾಳಿ ನಡೆಸಿದೆ. ಬೆಂಗಳೂರಿನ ಚಾಮರಾಜಪೇಟೆಯ ಅಪೆಕ್ಸ್ ಬ್ಯಾಂಕ್ ಗೆಸ್ಟ್‌ಹೌಸ್ ಮೇಲೂ ದಾಳಿ ನಡೆಸಲಾಗಿತ್ತು. ಈ ವೇಳೆ ಅವರನ್ನು ವಶಕ್ಕೆ ಪಡೆಯಲಾಗಿತ್ತು. ಇಂದು (ಏ.9) ಅವರನ್ನು ಬಂಧಿಸಿ, 1ನೇ ಸಿಸಿಹೆಚ್ ಕೋರ್ಟ್‌ಗೆ ಹಾಜರುಪಡಿಸಲಾಗಿದೆ. ನ್ಯಾಯಾಲಯ ಅವರನ್ನು 14 ದಿನಗಳ ಕಾಲ ಇಡಿ ಕಸ್ಟಡಿಗೆ ಒಪ್ಪಿಸಿದೆ. ಇದನ್ನೂ ಓದಿ: ಶಿವಮೊಗ್ಗ ಡಿಸಿಸಿ ಬ್ಯಾಂಕ್, ಅಧ್ಯಕ್ಷ ಮಂಜುನಾಥ ಗೌಡ ನಿವಾಸದ ಮೇಲೆ ಇಡಿ ದಾಳಿ
ಕೋಟ್ಯಂತರ ರೂ. ಹಣ ದುರ್ಬಳಕೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ 2018 ರಲ್ಲಿ ಡಿಸಿಸಿ ಬ್ಯಾಂಕ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಆ ಸಂದರ್ಭದಲ್ಲಿ ಮಂಜುನಾಥ ಗೌಡ ಅವರನ್ನು ಎಸಿಬಿ ಬಂಧನ ಮಾಡಿತ್ತು. ಆದರೆ ಚಾರ್ಜ್ ಶೀಟ್‌ನಲ್ಲಿ ಮಂಜುನಾಥ್ ಗೌಡ ಹೆಸರನ್ನು ಕೈಬಿಡಲಾಗಿತ್ತು. ಬಳಿಕ ಇಡಿ ಇಸಿಐಆರ್ ದಾಖಲು ಮಾಡಿ ತನಿಖೆ ನಡೆಸಲು ಮುಂದಾಗಿತ್ತು.
ಇಡಿ ತನಿಖೆಗೆ ಮುಂದಾಗುತ್ತಿದ್ದಂತೆ ಮಂಜುನಾಥ್ ಗೌಡ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದರು. ಇಡಿ ಕಾನೂನು ಹೋರಾಟದ ಬಳಿಕ ಹೈಕೋರ್ಟ್ ತಡೆಯಾಜ್ಞೆ ತೆರವು ಮಾಡಿತ್ತು. ಇದನ್ನೂ ಓದಿ: ಲಾರಿ, ಬೈಕ್, ಅಂಬುಲೆನ್ಸ್ ನಡುವೆ ಸರಣಿ ಅಪಘಾತ – ಬಿಎಸ್‌ಎಫ್ ಯೋಧ ಸ್ಥಳದಲ್ಲೇ ಸಾವು