– ತವರಿನಲ್ಲೇ ಗುಜರಾತ್ ಟೈಟಾನ್ಸ್‌ಗೆ ಹೀನಾಯ ಸೋಲು
ಅಹಮದಾಬಾದ್: ಸಂಘಟಿತ ಬ್ಯಾಟಿಂಗ್, ಬೌಲಿಂಗ್ ಪ್ರದರ್ಶನದಿಂದ ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡವು ಗುಜರಾತ್ ಟೈಟಾನ್ಸ್ ವಿರುದ್ಧ 6 ವಿಕೆಟ್‌ಗಳ ಅಮೋಘ ಜಯ ಸಾಧಿಸಿದೆ. ಇದರೊಂದಿಗೆ 9ನೇ ಸ್ಥಾನದಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ -0.074 ನೆಟ್ ರನ್‌ರೇಟ್ ಮತ್ತು 6 ಅಂಕಗಳೊಂದಿಗೆ 6ನೇ ಸ್ಥಾನಕ್ಕೆ ಜಿಗಿದಿದೆ.
Advertisement
ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ (Gujarat Titans) ತಂಡ ಅಗ್ರ ಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯದಿಂದ 17.3 ಓವರ್‌ಗಳಲ್ಲಿ 89 ರನ್‌ಗಳಿಗೆ ಆಲೌಟ್ ಆಯಿತು. 90 ರನ್‌ಗಳ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕೇವಲ 8.5 ಓವರ್‌ಗಳಲ್ಲೇ 4 ವಿಕೆಟ್ ನಷ್ಟಕ್ಕೆ 92 ರನ್ ಸಿಡಿಸಿ ಗೆಲುವು ಸಾಧಿಸಿತು.
Advertisement
90 ರನ್‌ಗಳ ಅಲ್ಪ ಮೊತ್ತದ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ಪರ ಬ್ಯಾಟರ್‌ಗಳು ಆರಂಭದಲ್ಲೇ ಸ್ಫೋಟಕ ಪ್ರದರ್ಶನಕ್ಕೆ ಮುಂದಾದರು. ಒಂದೆಡೆ ವಿಕೆಟ್ ಕಳೆದುಕೊಳ್ಳುತ್ತಿದ್ದರೂ ಅಬ್ಬರಿಸಿದ ಬ್ಯಾಟರ್‌ಗಳು ಪವರ್ ಪ್ಲೇ ಮುಗಿಯುವ ವೇಳೆಗೆ 67 ರನ್ ಬಾರಿಸಿದ್ದರು.
Advertisement
Advertisement
ಆರಂಭಿಕ ಜೇಕ್ ಫ್ರೇಸರ್-ಮ್ಯಾಕ್‌ಗುರ್ಕ್ ಮೊದಲ 10 ಎಸೆತಗಳಲ್ಲೇ 20 ರನ್ ಚಚ್ಚಿ ಪೆವಿಲಿಯನ್‌ಗೆ ಮರಳಿದರು. ಈ ಬೆನ್ನಲ್ಲೇ ಪೃಥ್ವಿ ಶಾ ಸಹ 7 ರನ್‌ಗಳಿಗೆ ಔಟಾದರು. ಇದರಿಂದ ಗುಜರಾತ್ ಸಹ ಡೆಲ್ಲಿ ಕ್ಯಾಪಿಟಲ್ಸ್‌ಗೆ ಕಠಿಣ ಪೈಪೋಟಿ ನೀಡಲಿದೆ ಎಂದು ಭಾವಿಸಲಾಗಿತ್ತು. ಆದ್ರೆ ಅಭಿಷೇಕ್ ಪೋರೆಲ್, ಶಾಯ್ ಹೋಪ್, ರಿಷಭ್ ಪಂತ್ (Rishabh Pant) ಅವರ ಸ್ಫೋಟಕ ಪ್ರದರ್ಶನ ಡೆಲ್ಲಿ ತಂಡ ಸುಲಭ ಜಯ ಸಾಧಿಸುವಂತೆ ಮಾಡಿತು. ಡೆಲ್ಲಿ ಪರ ಅಭಿಷೇಕ್ ಪೋರೆಲ್ 7 ಎಸೆತಗಳಲ್ಲಿ 15 ರನ್, ಶಾಯ್ ಹೋಪ್ 19 ರನ್ ಗಳಿಸಿ ಔಟಾದರೆ, ರಿಷಭ್ ಪಂತ್ 16 ರನ್, ಸುಮಿತ್ ಕುಮಾರ್ 9 ರನ್ ಗಳಸಿ ಅಜೇಯರಾಗುಳಿದರು. ಗುಜರಾತ್‌ಟೈಟಾನ್ಸ್ ಪರ ಸಂದೀಪ್ ವಾರಿಯರ್ 2 ವಿಕೆಟ್ ಕಿತ್ತರೆ, ಸ್ಪೆನ್ಸರ್ ಜಾನ್ಸನ್, ರಶೀದ್ ಖಾನ್ ತಲಾ ಒಂದೊಂದು ವಿಕೆಟ್ ಪಡೆದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು ಆರಂಭದಲ್ಲೇ ಆಘಾತ ಅನುಭವಿಸಿತು. ಅಗ್ರ ಕ್ರಮಾಂಕದ ಬ್ಯಾಟರ್‌ಗಳ ಕಳಪೆ ಪ್ರದರ್ಶನದಿಂದಾಗಿ ಮೊದಲ 5 ಓವರ್‌ಗಳಲ್ಲೇ 30 ರನ್‌ಗಳಿಗೆ ಪ್ರಮುಖ 4 ವಿಕೆಟ್ ಕಳೆದುಕೊಂಡಿತ್ತು. ಆ ನಂತರ ಕ್ರೀಸ್‌ಗೆ ಬಂದ ಬ್ಯಾಟರ್‌ಗಳು ಭದ್ರವಾಗಿ ನೆಲೆಯೂರದೇ ಪೆವಿಲಿಯನ್ ಪರೇಡ್ ನಡೆಸಿದರು. ಈ ನಡುವೆ ರಶೀದ್ ಖಾನ್ ಅವರ ಸಾಧಾರಣ ಮೊತ್ತದ ಕೊಡುಗೆಯು ತಂಡವನ್ನು 90 ರನ್‌ಗಳ ಗಡಿ ತಲುಪುವಂತೆ ಮಾಡಿತು.
ಗುಜರಾತ್ ಪರ ಏಕಾಂಗಿ ಹೋರಾಟ ನಡೆಸಿದ ರಶೀದ್ ಖಾನ್ 31 ರನ್ (24 ಎಸೆತ, 1 ಸಿಕ್ಸರ್, 2 ಬೌಂಡರಿ) ಗಳಿಸಿದರು. ಉಳಿದಂತೆ ವೃದ್ಧಿಮಾನ್ ಸಾಹಾ 2 ರನ್, ಶುಭಮನ್ ಗಿಲ್ 8 ರನ್, ಸಾಯಿ ಸುದರ್ಶನ್ 12 ರನ್, ಡೇವಿಡ್ ಮಿಲ್ಲರ್ 2 ರನ್, ಅಭಿನವ್ ಮನೋಹರ್ 8 ರನ್, ರಾಹುಲ್ ತೆವಾಟಿಯಾ 10 ರನ್, ಮೋಹಿತ್ ಶರ್ಮಾ 2 ರನ್, ನೂರ್ ಅಹ್ಮದ್ 1 ರನ್, ಸ್ಪೆನ್ಸರ್ ಜಾನ್ಸನ್ 1 ರನ್ ಗಳಿಸಿದರೆ, ಶಾರೂಖ್‌ಖಾನ್ ಶೂನ್ಯಕ್ಕೆ ನಿರ್ಗಮಿಸಿದರು.
ಡೆಲ್ಲಿ ಕ್ಯಾಪಿಟಲ್ಸ್ ಪರ ಮುಕೇಶ್ ಕುಮಾರ್ 2.3 ಓವರ್‌ಗಳಲ್ಲಿ ಕೇವಲ 14 ರನ್ ಬಿಟ್ಟುಕೊಟ್ಟು 3 ವಿಕೆಟ್ ಕಿತ್ತರೆ, ಇಶಾಂತ್ ಶರ್ಮಾ ಮತ್ತು ಟ್ರಿಸ್ಟಾನ್ ಸ್ಟಬ್ಸ್ ತಲಾ ಎರಡು ವಿಕೆಟ್ ಹಾಗೂ ಖಲೀಲ್ ಅಹ್ಮದ್ ಮತ್ತು ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.