– ದಮ್ಮಯ್ಯ ಎನ್ನುತ್ತೇನೆ ಕೋಳಿ ಬಿಡ್ರಪ್ಪ
ದಾವಣಗೆರೆ: ಮಕ್ಕಳಂತೆ ಸಾಕಿದ್ದೇನೆ. ದಮ್ಮಯ್ಯ ಎನ್ನುತ್ತೇನೆ ಕೋಳಿ ಬಿಡ್ರಪ್ಪ ಎಂದು ವೃದ್ಧೆಯೊಬ್ಬರು ಗೋಳಾಡಿದ ಘಟನೆ ಜಿಲ್ಲೆಯ ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಪಕ್ಕದಲ್ಲೇ ಇರುವ ಅಭಿಷೇಕ್ ಎನ್ನುವರಿಗೆ ಸೇರಿದ ಕೋಳಿ ಫಾರಂನಲ್ಲಿ ಹಕ್ಕಿರೋಗ ಕಂಡುಬಂದಿದ್ದು, ಅಧಿಕಾರಿಗಳು ಕೂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಜಿಲ್ಲಾಧಿಕಾರಿಗಳು ಕೂಡ ಫಾರಂನ ಒಂದು ಕಿಲೋಮೀಟರ್ ಸುತ್ತಳತೆಯಲ್ಲಿರುವ ಕೋಳಿಗಳನ್ನು ಹಾಗೂ ಸಾಕು ಪಕ್ಷಿಗಳನ್ನು ನಾಶ ಪಡಿಸಲು ಕಿಲ್ಲಿಂಗ್ ಆರ್ಡರ್ ನೀಡಿದ್ದಾರೆ. ಇಂದು ಬೆಳಗ್ಗೆಯಿಂದಲೇ ಆರೋಗ್ಯ ಇಲಾಖೆ ಹಾಗೂ ಪಶುಸಂಗೋಪನೆ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಬನ್ನಿಕೋಡು ಗ್ರಾಮದಲ್ಲಿರುವ ಕೋಳಿಗಳನ್ನು ನಾಶಮಾಡಲು ರ‍್ಯಾಪಿಡ್ ಟೀಮ್ ರೆಡಿ ಮಾಡಿಕೊಂಡಿದ್ದಾರೆ.
ಬನ್ನಿಕೋಡು ಗ್ರಾಮದಲ್ಲಿ 1,167 ಸಾಕು ಕೋಳಿಗಳಿದ್ದು,12 ಜನರ ರ‍್ಯಾಪಿಡ್ ರೆಸ್ಪಾನ್ಸ್ ಟೀಂನಿಂದ ಕಿಲ್ಲಿಂಗ್ ಅಪರೇಷನದ ಶುರು ಮಾಡಿದ್ದಾರೆ. ಗ್ರಾಮದಲ್ಲಿ ಇರುವ ಕೋಳಿಗಳನ್ನು ಹಾಗೂ ಸಾಕು ಪಕ್ಷಿಗಳನ್ನು ಹಿಡಿದು ನಾಶ ಮಾಡಿ ಗ್ರಾಮದ ಹೊರ ಭಾಗದಲ್ಲಿರುವ ಗುಂಡಿಯಲ್ಲಿ ಹಾಕಿ ಮುಚ್ಚಲು ಮುಂದಾಗಿದ್ದಾರೆ. ಆದರೆ ಗ್ರಾಮದ ವೃದ್ಧೆ ಸೀತಮ್ಮ ತಮ್ಮ ಕೋಳಿಗಳನ್ನು ಹಿಡಿದುಕೊಂಡು ಹೋಗಬೇಡಿ ಎಂದು ಗೋಳಾಡಿದ್ದಾಳೆ. ಕೋಳಿಗಳನ್ನು ಮಕ್ಕಳಂತೆ ಸಾಕಿದ್ದೇನೆ. ದಮ್ಮಯ್ಯ ಎನ್ನುತ್ತೇನೆ ನನ್ ಕೋಳಿ ಬಿಡ್ರಪ್ಪ. ಕೋಳಿ ಬದಲು ನನ್ನನ್ನು ಸಾಯಿಸಿ ಎಂದು ವೃದ್ಧೆ ಗೋಳಾಡಿದ್ದಾಳೆ.
ವೃದ್ಧೆ ಸೀತಮ್ಮನ ಬಳಿ 9 ಕೋಳಿಗಳಿದ್ದು, ಆ ಕೋಳಿಗಳಿಂದಲೇ ಜೀವನ ನಡೆಸುತ್ತಿದ್ದಳು. ಈಗ ಕಿಲ್ಲಿಂಗ್ ಆದೇಶ ಬಂದಿದ್ದೇ ತಡ ಗ್ರಾಮಕ್ಕೆ ನುಗ್ಗಿದ ರ‍್ಯಾಪಿಡ್ ಟೀಮ್ ಒಂದು ಕೋಳಿಯನ್ನು ಬಿಡದೇ ಹಿಡಿದು ಗುಂಡಿಯಲ್ಲಿ ಹೂಳುತ್ತಿದ್ದಾರೆ. ಅದಕ್ಕೆ ವೃದ್ಧೆ ಸೀತಮ್ಮ ಮಾತ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕೋಳಿಯನ್ನು ಸಾಯಿಸುವ ಬದಲು ನನ್ನನ್ನು ಸಾಯಿಸಿ ಎಂದು ಗೋಳಾಡಿದ್ದಾಳೆ. ಆದರೆ ಅಧಿಕಾರಿಗಳು ಮಾತ್ರ ಆದೇಶದಂತೆ ಕೋಳಿಯನ್ನು ಬಿಡದೆ ಗುಂಡಿಯಲ್ಲಿ ಮುಚ್ಚಿದ್ದಾರೆ. ಅಲ್ಲದೇ ವೃದ್ಧೆಗೆ ಸಮಾಧಾನ ಮಾಡಿ ನಿಮಗೆ ಪರಿಹಾರ ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ.
https://www.facebook.com/publictv/videos/792337247922752/