– ಅಧಿಕಾರ ಹಿಡಿಯಲು ಕಾಂಗ್ರೆಸ್, ಬಿಜೆಪಿ ಮಧ್ಯೆ ಪೈಪೋಟಿ
– ಪಕ್ಷೇತರರು ಬೆಂಬಲ ನೀಡಿದ್ರೆ ಬಿಜೆಪಿ ಅಧಿಕಾರಕ್ಕೆ
– ಕೈ ಬಂಡಾಯ ಅಭ್ಯರ್ಥಿ ಬೆಂಬಲ ನೀಡಿದ್ರೆ ಕಾಂಗ್ರೆಸ್ಸಿಗೆ ಪಾಲಿಕೆ
ದಾವಣಗೆರೆ: ಮಹಾನಗರ ಪಾಲಿಕೆ ಚುನಾವಣೆಯ ದಂಗಲ್ ತೆರೆಕಂಡಿದ್ದು, ಕಾಂಗ್ರೆಸ್ 22 ಸ್ಥಾನಗಳನ್ನು ಗಳಿಸುವ ಮೂಲಕ ಸರಳ ಬಹುಮತಕ್ಕೆ ಒಂದು ಸ್ಥಾನ ಕಡಿಮೆ ಗಳಿಸಿದೆ.
ಒಟ್ಟು 45 ವಾರ್ಡ್ ಗಳು ಇರುವ ಪಾಲಿಕೆ ಗದ್ದಿಗೆ ಹಿಡಿಯಲು ಇದೀಗ ಸೆಣಸಾಟ ಪ್ರಾರಂಭವಾಗಿದೆ. ಕಾಂಗ್ರೆಸ್ 22, ಬಿಜೆಪಿ 17, ಜೆಡಿಎಸ್ 1 ಹಾಗೂ, ಐದು ಮಂದಿ ಪಕ್ಷೇತರರು ಗೆಲುವು ಪಡೆದಿದ್ದಾರೆ.
Advertisement
ಪಾಲಿಕೆ ಅಧಿಕಾರ ಹಿಡಿಯಲು 23 ಸ್ಥಾನಗಳ ಅಗತ್ಯವಿದ್ದು, ಕಾಂಗ್ರೆಸ್‍ಗೆ ಅಧಿಕಾರ ವಹಿಸಿಕೊಳ್ಳಲು ಎಲ್ಲ ಅವಶಾಶಗಳು ಇವೆ. ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ 45 ನೇ ವಾರ್ಡ್ ನ ಉದಯ್ ಕುಮಾರ್ ಗೆಲುವು ಸಾಧಿಸಿದ್ದು, ಇವರು ಕಾಂಗ್ರೆಸ್ ಗೆ ಬೆಂಬಲ ನೀಡಿದರೆ ಅಧಿಕಾರ ಹಿಡಿಯಲು ಕಾಂಗ್ರೆಸ್ ಗೆ ಸುಲಭದ ದಾರಿಯಾಗಲಿದೆ. ಅಲ್ಲದೆ ಕಳೆದ ಬಾರಿಯೂ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಹೀಗಾಗಿ ಶತಾಯ ಗತಾಯ ಅಧಿಕಾರ ಉಳಿಸಿಕೊಳ್ಳಬೇಕೆಂದು ಕಾಂಗ್ರೆಸ್ ಕಸರತ್ತು ನಡೆಸಿದೆ.
Advertisement
Advertisement
ಕೇವಲ 17 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ವಿರೋಧ ಪಕ್ಷದ ಸ್ಥಾನದಲ್ಲಿ ಕೂರಲಿದೆ. ಘಟಾನುಘಟಿಗಳು ಕಣಕ್ಕಿಳಿದಿದ್ದು ಈ ಬಾರಿ ಚುನಾವಣೆಯ ವಿಶೇಷವಾಗಿತ್ತು. ಕಾಂಗ್ರೆಸ್ ನ ಹಿರಿಯ ಮುಖಂಡ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ ನವರ ಆಪ್ತ ದಿನೇಶ್.ಕೆ.ಶೆಟ್ಟಿ 17 ನೇ ವಾರ್ಡ್ ನಿಂದ ಸೋಲು ಅನುಭವಿಸಿದ್ದು, ಬಿಜೆಪಿಯ ಅಜಯ್ ಕುಮಾರ್ ಗೆಲುವಿನ ನಗೆ ಬೀರಿದ್ದಾರೆ. ಬಿಜೆಪಿಯ ಮಾಜಿ ಸಚಿವ ಹಾಗೂ ಶಾಸಕ ಎಸ್.ಎ.ರವೀಂದ್ರನಾಥ್ ಪುತ್ರಿ ವೀಣಾ ನಂಜಪ್ಪ 40ನೇ ವಾರ್ಡ್ ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.
Advertisement
ಕಾಂಗ್ರೆಸ್ ಅಭ್ಯರ್ಥಿಯಾಗಿ ನಿಂತಿದ್ದ ಪತಿ-ಪತ್ನಿ ಇಬ್ಬರೂ ಗೆಲುವು ಸಾಧಿಸಿದ್ದು, ಪತಿ 28 ನೇ ವಾರ್ಡ್ ಜೆ.ಎನ್.ಶ್ರೀನಿವಾಸ್ ಜಯ ಗಳಿಸಿದರೆ, ಅತ್ತ ಪತ್ನಿ ಶ್ವೇತಾ ಶ್ರೀನಿವಾಸ್ 37ನೇ ವಾರ್ಡ್ ನಲ್ಲಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷರ ಪುತ್ರ 26 ವರ್ಷದ ರಾಕೇಶ್ ಜಾಧವ್ ಜಯಗಳಿಸಿದ್ದಾರೆ. 10 ನೇ ವಾರ್ಡಿನಲ್ಲಿ ಮಾಜಿ ಮೇಯರ್ ಅನಿತಾಬಾಯಿ ಪತಿ ಮಾಲತೇಶ್ ರಾವ್ ಜಾಧವ್ ವಿರುದ್ಧ ಗೆಲುವು ಸಾಧಿಸಿ ಅತಿ ಚಿಕ್ಕ ವಯಸ್ಸಿನ ಪಾಲಿಕೆ ಸದಸ್ಯರಾಗಿದ್ದಾರೆ.
ಇನ್ನು ಮೇಯರ್ ಪಟ್ಟಕ್ಕಾಗಿ ಎರಡು ಪಕ್ಷಗಳು ಕಸರತ್ತು ನಡೆಸುತ್ತಿವೆ. ಅಲ್ಲದೆ 17 ನೇ ವಾರ್ಡ್ ನ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಸ್.ಜಿ.ರವಿ ಕೇವಲ ಎರಡು ಮತಗಳನ್ನು ಪಡೆದ ಅಭ್ಯರ್ಥಿಯಾಗಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿದ್ದ ರವಿ ಕೇವಲ ಎರಡು ಮತಗಳನ್ನು ಪಡೆಯುವ ಮೂಲಕ ಇಡೀ ಪಾಲಿಕೆ ಚುನಾವಣೆಯಲ್ಲಿ ಅತಿ ಕಡಿಮೆ ಮತ ಪಡೆದ ಅಭ್ಯರ್ಥಿಯಾಗಿದ್ದಾರೆ.
ಮೇಯರ್ ಪಟ್ಟಕ್ಕಾಗಿ ಕಸರತ್ತು:
ಮೇಯರ್ ಪಟ್ಟಕ್ಕಾಗಿ ಬಿಜೆಪಿ ಕಾಂಗ್ರೆಸ್ ನಡುವೇ ಪೈಪೋಟಿ ಜೋರಾಗಿದ್ದು, ಈ ಬಾರಿ ಮೇಯರ್ ಪಟ್ಟ ಬಿಜೆಪಿಗೆ ಸಿಗುವ ವಿಶ್ವಾಸವಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಹೇಳಿದ್ದಾರೆ. 4 ಜನ ಪಕ್ಷೇತರರ ಬೆಂಬಲದಿಂದ ಬಿಜೆಪಿ ಅಧಿಕಾರ ಹಿಡಿಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಿಜೆಪಿ 17, 4 ಪಕ್ಷೇತರರು ಹಾಗೂ ಮೂವರು ಶಾಸಕರು, ಒಬ್ಬ ಸಂಸದರ ಬಲಾಬಲ ಇಟ್ಟುಕೊಂಡು ಬಿಜೆಪಿ ಅಧಿಕಾರ ಹಿಡಯಲು ಕಸರತ್ತು ನಡೆಸಿದೆ.
ಕಾಂಗ್ರೆಸ್‍ನಿಂದಲೂ ಪ್ರಯತ್ನ
ಇತ್ತ ಪಾಲಿಕೆಯ ಆಡಳಿತ ನಡೆಸಲು ಕಾಂಗ್ರೆಸ್ ಸಹ ಸಿದ್ಧವಾಗಿದ್ದು, 22 ಸದಸ್ಯರು ಜಯಗಳಿಸಿದ್ದು, ಒಬ್ಬರು ಶಾಸಕರು, ಒಬ್ಬರು ವಿಧಾನ ಪರಿಷತ್ ಸದಸ್ಯರು ಸೇರಿ ಒಟ್ಟು 24 ಸದಸ್ಯರ ಬಲ ಆಗುತ್ತದೆ. ಪಾಲಿಕೆ ಅಧಿಕಾರ ನಮ್ಮ ತೆಕ್ಕೆಗೆ ಬರಲಿದೆ ಎಂದು ಕಾಂಗ್ರೆಸ್ ಲೆಕ್ಕಾಚಾರ ಹಾಕಿದೆ. ಅಲ್ಲದೆ ಇಬ್ಬರು ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಗಳು ಕಾಂಗ್ರೆಸ್ ಗೆ ಸಪೋರ್ಟ್ ಮಾಡುವ ಸಾಧ್ಯತೆ ಇದೆ. ಇಬ್ಬರೂ ಸಹ ಆಡಳಿತದ ಚುಕ್ಕಾಣಿ ಹಿಡಿಯಲು ತುದಿಗಾಲಲ್ಲಿ ನಿಂತಿದ್ದು, ಯಾರು ಅಧಿಕಾರ ವಹಿಸಿಕೊಳ್ಳುತ್ತಾರೋ ಕಾದು ನೋಡಬೇಕಿದೆ.