ದಾವಣಗೆರೆ: ನಾಲ್ಕು ದಿನದ ಹಿಂದೆ ಜ್ವರ ಬಂದಿದೆ ಎಂಬ ಕಾರಣಕ್ಕೆ ವೈದ್ಯರ ಬಳಿ ಇಂಜೆಕ್ಷನ್ ಮಾಡಿಸಿಕೊಂಡಿದ್ದ ಯುವಕನೊಬ್ಬ ಮೃತಪಟ್ಟ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ದಾವಣಗೆರೆ ತಾಲೂಕು ಹಳೇ ಕುಂದುವಾಡ ಗ್ರಾಮ ಪ್ರವೀಣ್ ಮೃತ ಯುವಕ. ಪ್ರವೀಣ್‍ಗೆ ಕಳೆದ ಮೂರು ದಿನದ ಹಿಂದೆ ಜ್ವರ ಕಾಣಿಸಿಕೊಂಡಿತ್ತು. ಹೀಗಾಗಿ ಗ್ರಾಮದಲ್ಲಿದ್ದ ಆಯುಷ್ ಆಯುರ್ವೇದ ವೈದ್ಯಾಧಿಕಾರಿ ಡಾ.ಶಿವಲಿಂಗ ರುದ್ರಪ್ಪ ಜವಳಿ ಅವರ ಕ್ಲಿನಿಕ್‍ಗೆ ಹೋಗಿ ಇಂಜೆಕ್ಷನ್ ಮಾಡಿಸಿಕೊಂಡು ಬಂದಿದ್ದ.
Advertisement
Advertisement
ಇಂಜೆಕ್ಷನ್ ಮಾಡಿಸಿಕೊಂಡ ಕೇವಲ ಎರಡು ಗಂಟೆಗೆ ಪ್ರವೀಣ್ ಕೈ ಕಾಲು, ದೇಹ ಊದಿಕೊಳ್ಳಲು ಆರಂಭಿಸಿದೆ. ಇದರಿಂದ ಗಾಬರಿಗೊಂಡ ಕುಟುಂಬಸ್ಥರು ತಕ್ಷಣವೇ ಪ್ರವೀಣ್‍ನನ್ನು ಡಾ. ಶಿವಲಿಂಗ ಅವರ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ವೈದ್ಯ ಶಿವಲಿಂಗ ಅವರು ಇದನ್ನು ಯಾರಿಗೂ ಹೇಳಬೇಡಿ ಎಂದು ಹೇಳಿ, ಪ್ರವೀಣ್‍ನನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಿ ಪರಾರಿಯಾಗಿದ್ದಾನೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರವೀಣ್ ಮೃತಪಟ್ಟಿದ್ದು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಾವಿಗೆ ವೈದ್ಯ ಶಿವಲಿಂಗ ಅವರೇ ನೇರ ಕಾರಣ ಎಂದು ಪ್ರವೀಣ್ ಪೋಷಕರು ಆರೋಪಿಸಿದ್ದಾರೆ.
Advertisement
ವೈದ್ಯ ಶಿವಲಿಂಗ ಜವಳಿ ಮೂರು ವರ್ಷದ ಹಿಂದೆ ಹಳೇ ಕುಂದುವಾಡ ಗ್ರಾಮದಲ್ಲಿ ಕ್ಲಿನಿಕ್ ಪ್ರಾರಂಭಿಸಿದ್ದರು. ಇಲ್ಲಿ ಚಿಕಿತ್ಸೆ ಪಡೆದ ಅನೇಕರು ಹಲವಾರು ಸಮಸ್ಯೆಗಳಿಗೆ ಗುರಿಯಾಗಿದ್ದಾರೆ. ಈ ಬಗ್ಗೆ ಯಾರೊಬ್ಬರೂ ವೈದ್ಯರ ಬಳಿ ಯಾವುದೇ ಪ್ರಶ್ನೆ ಮಾಡದೆ ಸುಮ್ಮನಿದ್ದರು. ಆದರೆ ಪ್ರವೀಣ್ ಸಾವಿನ ಪ್ರಕರಣದಲ್ಲಿ ವೈದ್ಯರ ನಿರ್ಲಕ್ಷ ಎದ್ದು ಕಾಣುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
Advertisement
ಈ ಸಂಬಂಧ ಪ್ರವೀಣ್ ಪೋಷಕರು ವೈದ್ಯ ಶಿವಲಿಂಗ ಜವಳಿ ವಿರುದ್ಧ ದಾವಣಗೆರೆಯ ವಿದ್ಯಾನಗರ ಠಾಣೆಗೆ ದೂರು ನೀಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಪ್ರವೀಣ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಜೊತೆಗೆ ತನಿಖೆ ಆರಂಭಿಸಿದ್ದಾರೆ.