ದಾವಣಗೆರೆ: ಬೆಣ್ಣೆ ನಗರಿ ದಾವಣಗೆರೆಯಲ್ಲಿ ಹುಡುಗರು ಇನ್ನು ಮುಂದೆ ಯುವತಿಯರನ್ನು ಚುಡಾಯಿಸುವವರನ್ನು ಮಟ್ಟ ಹಾಕಲೆಂದೇ ಹೊಸ ಪಡೆಯೊಂದು ಇದೀಗ ರಸ್ತೆಗಿಳಿದಿದೆ. ಹುಡುಗರ ಪುಂಡಾಟಿಕೆಗಳಿಗೆ ಬ್ರೇಕ್ ಹಾಕುವ ಮೂಲಕ ಶಾಲಾ ಕಾಲೇಜು ವಿದ್ಯಾರ್ಥಿನಿಯರಿಗೆ ರಕ್ಷಣೆ ನೀಡಲು ಈ ಪಡೆ ಸಜ್ಜುಗೊಂಡಿದೆ.
Advertisement
ಹೌದು. ಇತ್ತೀಚಿನ ದಿನಗಳಲ್ಲಿ ಶಾಲಾ ಕಾಲೇಜುಗಳ ಬಳಿ ಯುವಕರು ಗುಂಪು ಕಟ್ಟಿಕೊಂಡು ವಿದ್ಯಾರ್ಥಿನಿಯರನ್ನು ಚುಡಾಯಿಸುವುದು, ರ್ಯಾಗ್ ಮಾಡುವುದು ಸಾಮಾನ್ಯವಾಗಿ ಬಿಟ್ಟಿದೆ. ಇದರಿಂದಾಗಿ ವಿದ್ಯಾರ್ಥಿನಿಯರು ಶಾಲಾ, ಕಾಲೇಜುಗಳಿಗೆ ಸುರಕ್ಷಿತವಾಗಿ ಹೋಗಿ ಬರುವುದೇ ಕಷ್ಟಕರವಾಗಿದೆ. ಕೆಲ ಯುವಕರು ಗುಂಪು ಕಟ್ಟಿಕೊಂಡು ಶಾಲಾ ಕಾಲೇಜು, ಬಸ್ ನಿಲ್ದಾಣ, ಜನನಿಬೀಡ ಪ್ರದೇಶಗಳಲ್ಲಿ ಯುವತಿಯರನ್ನು ರೇಗಿಸುವುದು ಹೆಚ್ಚಾಗುತ್ತಿದೆ. ಇಂತಹ ಗುಂಪುಗಳನ್ನು ಮಟ್ಟ ಹಾಕಲು ಇದೀಗ ದುರ್ಗಾ ಪಡೆ ಸಜ್ಜಾಗಿದೆ.
Advertisement
ಪುಂಡ ಯುವಕರಿಗೆ ಕಡಿವಾಣ ಹಾಕುವುದು, ಯುವತಿಯರಿಗೆ, ಮಹಿಳೆಯರಿಗೆ ರಕ್ಷಣೆ ನೀಡುವುದು ದುರ್ಗಾ ಪಡೆಯ ಕಾರ್ಯವಾಗಿದೆ. ದುರ್ಗಾ ಪಡೆಯಲ್ಲಿ ಎಸ್‍ಐ ಸೇರಿದಂತೆ 15 ಜನ ಸಿಬ್ಬಂದಿಯಿದ್ದು ದಾವಣಗೆರೆ ನಗರದಾದ್ಯಂತ ಈ ವಾಹನ ಗಸ್ತು ತಿರುಗಲಿದೆ ಎಂದು ಎಸ್ ಪಿ ಹನುಮಂತರಾಯ್ ತಿಳಿಸಿದ್ದಾರೆ.
Advertisement
Advertisement
ಯುವತಿಯರನ್ನು ಚುಡಾಯಿಸುವ ಪೋಕರಿಗಳಿಗೆ ಕಡಿವಾಣ ಹಾಕಲೆಂದು ನಿರ್ಭಯ ಯೋಜನೆಯಡಿ ದುರ್ಗಾ ಪಡೆ ಸಿದ್ಧಪಡಿಸಲಾಗಿದೆ. ಇದಕ್ಕಾಗಿಯೇ ಒಂದು ವಾಹನವನ್ನು ಮೀಸಲಿಡಲಾಗಿದ್ದು, ಪುಂಡರನ್ನು ಮಟ್ಟ ಹಾಕಲು ಸಜ್ಜಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯ, ವಿದ್ಯಾರ್ಥಿನಿಯರನ್ನು ಚುಡಾಯಿಸುವುದು, ಸೈಬರ್ ಕ್ರೈಂ ಬಗ್ಗೆ ಅರಿವು ಮೂಡಿಸಿದ್ದು, ನಿರ್ಗತಿಕ ಮಕ್ಕಳ ರಕ್ಷಣೆ ಸೇರಿದಂತೆ ಡ್ರಗ್ಸ್ ಮಾರಾಟ ತಡೆಯುವ ಕೆಲಸವನ್ನು ಈ ದುರ್ಗಾ ಪಡೆ ಮಾಡಲಿದೆ ಎಂದು ಸರ್ಕಲ್ ಇನ್ಸ್ ಪೆಕ್ಟರ್ ನಾಗಮ್ಮ ತಿಳಿಸಿದ್ದಾರೆ.
ಮಹಿಳೆಯರಿಗೆ, ಮಕ್ಕಳಿಗೆ ಯಾವುದೇ ರೀತಿಯ ತೊಂದರೆಯಾದರೆ ಸಹಾಯವಾಣಿಯನ್ನು ಕೂಡ ದುರ್ಗಾ ಪಡೆ ಆರಂಭಿಸಿದೆ. 100, 08192-253088 ಈ ನಂಬರಿಗೆ ಫೋನ್ ಮಾಡಿದರೆ ಸಾಕು ದುರ್ಗಾ ಪಡೆ ಅಲ್ಲಿಗೆ ಹಾಜರಾಗಿ ಬಿಡುತ್ತದೆ. ನಗರದ ದೇವತೆ ದುರ್ಗಮ್ಮ ದೇವಿಯ ಹೆಸರಿನಲ್ಲಿ ಆರಂಭವಾಗಿರುವ ಈ ದುರ್ಗಾ ಪಡೆ ಮಹಿಳೆಯರ ರಕ್ಷಣೆಗೆ ಟೊಂಕಕಟ್ಟಿ ನಿಂತಿದೆ.