ದಾವಣಗೆರೆ: ತಾಯಿ ಸಂಸದೆ ಪ್ರಭಾ ಮಲ್ಲಿಕಾರ್ಜುನ್ (Prabha Mallikarjun) ಜೊತೆಗೆ ಕಾಂಗ್ರೆಸ್ ಟಿಕೆಟ್ ಅಕಾಂಕ್ಷಿ ಸಮರ್ಥ್ ಶಾಮನೂರು (Samarth Shamanur) ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ದಾವಣಗೆರೆ ದಕ್ಷಿಣ (Davanagere South) ವಿಧಾನಸಭಾ ಕ್ಷೇತ್ರದ ಟಿಕೆಟ್ ಹಂಚಿಕೆ ಇನ್ನೂ ಆಗದೇ ಇದ್ದರೂ ಸಮರ್ಥ್ ನಾಮಪತ್ರ ಸಲ್ಲಿಕೆ ಮಾಡಿ ಹುಬ್ಬೇರಿಸಿದ್ದಾರೆ.
ಪಬ್ಲಿಕ್ ಟಿವಿಗೆ ಸಮರ್ಥ್ ಪ್ರತಿಕ್ರಿಯಿಸಿ, ತಾತನ ಕಾರಿನಲ್ಲೇ ಬಂದು ನಾಮಪತ್ರ ಸಲ್ಲಿಕೆ ಮಾಡಿದ್ದೇನೆ. ಅವರ ಸ್ಥಾನವನ್ನು ತುಂಬುವ ಕೆಲಸವನ್ನು ಮಾಡುತ್ತೇವೆ. ಅವರ ಕೊಠಡಿಯಲ್ಲಿ ಕುಳಿತು ನಾಮಪತ್ರಕ್ಕೆ ಸಹಿ ಹಾಕಿದ್ದೇನೆ ಎಂದು ತಿಳಿಸಿದರು.
ಜನರು ನಮ್ಮ ಮನೆಗೆ ಬಂದ ತಕ್ಷಣ ಶಾಮನೂರು ಅಜ್ಜ ಇದ್ದ ಕೊಠಡಿಗೆ ಹೋಗುತ್ತಿದ್ದರು. ಆದರೆ ಈಗ ಅದು ಖಾಲಿ ಖಾಲಿಯಾಗಿದೆ. ನನಗೆ ಸಾಕಷ್ಟು ಚುನಾವಣೆ ಮಾಡಿರುವ ಅನುಭವ ಇದೆ. ಈ ಬಾರಿ ನನಗೆ ಟಿಕೆಟ್ ಸಿಗುವ ಭರವಸೆ ಇದ್ದು, ಸಾಕಷ್ಟು ಕಾರ್ಯಕರ್ತರ ಜೊತೆ ಒಡನಾಟವಿದೆ. ಕ್ಷೇತ್ರದ ಜನರು ಅಜ್ಜನನ್ನು ಆಯ್ಕೆ ಮಾಡಿದಂತೆ ನನಗೂ ಆಶೀರ್ವಾದ ಮಾಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು.

ಪ್ರಭಾ ಮಲ್ಲಿಕಾರ್ಜುನ್ ಪ್ರತಿಕ್ರಿಯಿಸಿ, ಚಿಕ್ಕ ವಯಸ್ಸಿನಲ್ಲಿ ಯುವಕ ಸಮರ್ಥ್ ಸಾಕಷ್ಟು ಉತ್ಸಾಹ ಹೊಂದಿದ್ದಾನೆ. ಈಗಾಗಲೇ ಟಿಕೆಟ್ ನೀಡುವಂತೆ ಹೈಕಮಾಂಡ್‌ಗೆ ಮನವಿ ಮಾಡಿದ್ದೇವೆ ಎಂದರು.
ಕ್ಷೇತ್ರದಲ್ಲಿ ತಾತನ ಜೊತೆ ಸಾಕಷ್ಟು ಚುನಾವಣೆ ಮಾಡಿ ಅನುಭವ ಇರುವ ಕಾರಣ ಈ ಬಾರಿ ಸಮರ್ಥ್ ಟಿಕೆಟ್ ಸಿಗುವ ಭರವಸೆ ಇದೆ. ಇಂದು ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರ ಜೊತೆ ಸಭೆ ಇರುವ ಕಾರಣ ಮಲ್ಲಿಕಾರ್ಜುನ್ ಹೋಗಿದ್ದಾರೆ. ಯಾರಿಗೆ ಟಿಕೆಟ್ ಸಿಗಲಿದೆ ಎನ್ನುವುದು ಇವತ್ತು ಸಂಜೆ ಅಥವಾ ನಾಳೆ ಗೊತ್ತಾಗಲಿದೆ. ನಾಮಪತ್ರ ಸಲ್ಲಿಕೆ ಮಾಡಲು ಎಲ್ಲರಿಗೂ ಹಕ್ಕು ಇದ್ದು ಅಲ್ಪಸಂಖ್ಯಾತರು ಕೂಡ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಯಾರಿಗೆ ಟಿಕೆಟ್ ಸಿಗುತ್ತದೆಯೋ ಅವರೇ ಅಂತಿಮ ಎಂದು ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.

