ದಾವಣಗೆರೆ: ಮಳೆಗಾಗಿ ದೇವರ ಮೊರೆ ಹೋಗುವುದು ಹಾಗೂ ಹೋಮ ಹವನಗಳನ್ನು ಮಾಡುವುದನ್ನು ಕೇಳಿದ್ದೇವೆ ಆದರೆ, ಜಿಲ್ಲೆಯ ಜಗಳೂರು ಪಟ್ಟಣದಲ್ಲಿ ವಿಶಿಷ್ಟವಾಗಿ ದೇವರ ಸಂತೆಯನ್ನು ಮಾಡುವ ಮೂಲಕ ಉತ್ತಮ ಮಳೆಯಾಗಲೆಂದು ಬೇಡಿಕೊಂಡಿದ್ದಾರೆ.
ಕಳೆದ ಹಲವು ವರ್ಷಗಳಿಂದ ಮಳೆ ಇಲ್ಲದೆ ರೈತರು ಕಷ್ಟವನ್ನು ಅನುಭವಿಸುತ್ತಿದ್ದು, ಉತ್ತಮ ಮಳೆಯಾಗಲೆಂದು ಜಗಳೂರು ಪಟ್ಟಣದಲ್ಲಿ ದೇವರ ಸಂತೆ ಮಾಡಲಾಗುತ್ತಿದೆ. ಪಟ್ಟಣದ ದೊಡ್ಡ ಮಾರಿಕಾಂಬಾ ದೇವಸ್ಥಾನದ ಮುಂಭಾಗ ಪೂಜೆ ಸಲ್ಲಿಸಿ ಸಂತೆ ನಡೆಸಲಾಯಿತು.
ಮೂರು ವಾರ ದೇವಸ್ಥಾನದ ಮುಂಭಾಗ ಸಂತೆ ಮಾಡಿದರೆ ಮಳೆ ಬರುತ್ತದೆ ಎನ್ನುವುದು ಇಲ್ಲಿನ ಜನರ ನಂಬಿಕೆ. ಅದ್ದರಿಂದ ಕಳೆದ ಹಲವು ವರ್ಷಗಳಿಂದ ಉತ್ತಮ ಮಳೆಯಾಗದೇ ರೈತರು ಕಷ್ಟದಲ್ಲಿದ್ದು, ಈ ಬಾರಿ ಮಳೆಯಾದರೆ ಫಸಲು ಕೈ ಸೇರುತ್ತದೆ. ಹೀಗಾಗಿ ಮಳೆ ಕರುಣಿಸುವಂತೆ ದೇವಿಯ ದೇವಸ್ಥಾನದ ಮುಂಭಾಗದಲ್ಲಿ ಸಂತೆ ಮಾಡುವ ಮೂಲಕ ಬೇಡಿಕೊಳ್ಳುತ್ತಿದ್ದಾರೆ.
ಪ್ರತಿ ಶನಿವಾರ ಸಂತೆ ಮೈದಾನದಲ್ಲಿ ಸಂತೆ ನಡೆಯುತ್ತಿತ್ತು. ಈ ವಾರದಿಂದ ಮೂರು ವಾರಗಳ ಕಾಲ ದೊಡ್ಡ ಮಾರಿಕಾಂಬಾ ದೇವಸ್ಥಾನದ ಮುಂಭಾಗ ಮಾಡಲಾಗುತ್ತದೆ. ದೇವಸ್ಥಾನದ ಮುಂಭಾಗ ಸಂತೆ ನಡೆಸಿದರೆ, ಮಳೆಯಾಗುತ್ತದೆ ಎಂಬುದು ಅನಾದಿಕಾಲದಿಂದಲೂ ಇರುವ ನಂಬಿಕೆ. ಹೀಗಾಗಿ ಜನ ಸಂತೆಯನ್ನೂ ಮಾಡಿ ನೋಡಿಯೇ ಬಿಡೋಣ ಮಳೆ ಬರಬಹುದು ಎಂದು ನಿರ್ಧರಿಸಿದ್ದಾರೆ.