ದಾವಣಗೆರೆ: ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಮತದಾರರ ಪಟ್ಟಿಯಲ್ಲಿ ಎಂಎಲ್‍ಸಿಗಳ ಸೇರ್ಪಡೆಯಲ್ಲಿ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಪಾಲಿಕೆಯ ಮತದಾರ ನೋಂದಾಣಾಧಿಕಾರಿ ಕೆ.ನಾಗರಾಜ್, ಉಪ ನೋಂದಾಣಾಧಿಕಾರಿ ಜಯಣ್ಣ ಕೆ. ಎಂಬವರನ್ನು ಅಮಾನತು ಮಾಡಿ ಅದೇಶ ಹೊರಡಿಸಿದ್ದಾರೆ.
ಜಿಲ್ಲಾಧಿಕಾರಿಗಳು ಅಮಾನತು ಮಾಡಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿದ್ದು, ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಬೇರೆ ಅಧಿಕಾರಿಗಳನ್ನು ಬಲಿ ಪಶು ಮಾಡಿದ್ದಾರೆ. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ 19 ರಂದು ನಡೆದ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಬೋಗಸ್ ದಾಖಲೆಗಳನ್ನು ನೀಡಿ ಎಂಎಲ್‍ಸಿ ಗಳನ್ನು ಸೇರ್ಪಡೆ ಮಾಡಲಾಗಿದೆ ಎನ್ನುವ ಅರೋಪ ಕೇಳಿ ಬಂದಿದೆ. ವಾಮಮಾರ್ಗದಲ್ಲಿ ಬಿಜೆಪಿ ಪಾಲಿಕೆ ಅಧಿಕಾರವನ್ನು ಹಿಡಿಯಲು ಈ ರೀತಿಯ ಕುತಂತ್ರವನ್ನು ಬಳಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು.
Advertisement
Advertisement
ಇದಕ್ಕೆ ಐಎಎಸ್ ಅಧಿಕಾರಿಯಾದ ಹರ್ಷಗುಪ್ತರನ್ನು ಕೂಡ ಚುನಾವಣೆಯ ವೀಕ್ಷಕರಾಗಿ ನೇಮಿಸಿದ್ದು, ಬೋಗಸ್ ದಾಖಲೆ ನೀಡಿದ ಎಂಎಲ್‍ಸಿಗಳ ಮನೆಗಳನ್ನು ಪರಿಶೀಲನೆ ಮಾಡಿ ವರದಿ ನೀಡಿದ್ದಾರೆ. ಇನ್ನು ಕಾಂಗ್ರೆಸ್ ಮತದಾರರ ಪಟ್ಟಿಯನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಕೂಡ ಹೋಗಿತ್ತು. ಚುನಾವಣೆ ಇರುವ ಕಾರಣ ಕೋರ್ಟ್ ಮಧ್ಯಪ್ರವೇಶ ಮಾಡುವುದಿಲ್ಲ. ಮತದಾನ ಮಾಡಬೇಕೋ ಅಥವಾ ಬೇಡವೋ ಎನ್ನುವುದು ಜಿಲ್ಲಾಧಿಕಾರಿಗಳ ವಿವೇಚನೆಗೆ ಬಿಟ್ಟ ವಿಚಾರ ಎಂದು ಸೂಚಿಸಿತ್ತು.
Advertisement
Advertisement
ಮತದಾನ ಮಾಡಲು ಜಿಲ್ಲಾಧಿಕಾರಿಗಳು ಅವಕಾಶ ಕೊಟ್ಟಿದ್ದಕ್ಕೆ ಕಾಂಗ್ರೆಸ್ ವಿರೋಧ ಕೂಡ ಮಾಡಿತ್ತು. ಆದ್ರೆ ಈಗ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿ ಅದೇಶ ನೀಡಿದ್ದು, ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಇದರಿಂದ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ನಡೆಯ ಮೇಲೆ ಬೇಸರಗೊಂಡಿದ್ದು, ತಾವು ತಪ್ಪಿಸಿಕೊಳ್ಳಲು ಈಗ ಇಬ್ಬರು ಅಧಿಕಾರಿಗಳನ್ನು ಬಲಿ ಪಶು ಮಾಡಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.
ವಿಧಾನ ಪರಿಷತ್ ಸದಸ್ಯರುಗಳನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲು ನೀಡಿದ ನಮೂನೆ-6 ಅರ್ಜಿಗಳ ಪರಿಶೀಲನೆ ಸಮಯದಲ್ಲಿ ಕಂಡುಬಂದ ಲೋಪದೋಷಗಳು ಮೇಲ್ನೋಟಕ್ಕೆ ಚುನಾವಣಾ ಕರ್ತವ್ಯದಲ್ಲಿನ ನಿರ್ಲಕ್ಷ್ಯ ತೋರಿಸುತ್ತವೆ. ಈ ಹಿನ್ನೆಲೆಯಲ್ಲಿ ಪ್ರಜಾಪ್ರತಿನಿಧಿ ಕಾಯ್ದೆ 1950 ಕಲಂ 32ರಂತೆ ಮತ್ತು ಕರ್ನಾಟಕ ಸಿವಿಲ್ ಸೇವಾ ನಿಯಮಗಳು 1957ರ ನಿಯಮ 10(1) (ಡಿ) ಅನ್ವಯ ಇಬ್ಬರು ಅಧಿಕಾರಿಗಳನ್ನು ತಕ್ಷಣದಿಂದ ನಿಲಂಬನೆಯಲ್ಲಿಡಲಾಗಿದೆ. ಸದರಿ ಅಧಿಕಾರಿಗಳು ನಿಲಂಬನಾ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಇಲ್ಲದೇ ಕೇಂದ್ರ ಸ್ಥಾನ ಬಿಡುವಂತಿಲ್ಲ ಮತ್ತು ನಿಲಂಬನಾ ಅವಧಿಯಲ್ಲಿ ಕೆಸಿಎಸ್‍ಆರ್ ನಿಯಮ 98ರಡಿ ಜೀವನಾಧಾರ ಭತ್ಯ ಪಡೆಯಲಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.