ದಾವಣಗೆರೆ: ನೋಣಗಳ ಕಾಟ ಹೆಚ್ಚಾದ ಹಿನ್ನೆಲೆಯಲ್ಲಿ ಕೋಳಿ ಪೌಲ್ಟ್ರಿ ಫಾರಂ ಅನ್ನು ತೆರವುಗೊಳಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಹರಿಹರ ತಾಲೂಕಿನ ಕೆಂಚನಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.
ನೋಣಗಳ ಹಾವಳಿಯಿಂದ ಕಂಗಾಲಾಗಿದ್ದು, ಸ್ಥಳೀಯ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಮುಂದೆ ಕುಳಿತು, ಕೋಳಿ ಫಾರಂ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
Advertisement
ಕೆಂಚನಹಳ್ಳಿ ಸಮೀಪದ ಗಿರೀಜಾ ರಮಣ್ ಪೌಲ್ಟ್ರಿ ಫಾರಂನಿಂದ ಗ್ರಾಮದಲ್ಲಿ ನೋಣ ಹೆಚ್ಚಾಗಿದ್ದು, ನಿತ್ಯವೂ ಅವುಗಳ ಕಾಟದಿಂದ ಗ್ರಾಮಸ್ಥರು ಕಂಗಾಲಾಗಿದ್ದಾರೆ. ಊಟ ಮಾಡಲು ಕುಳಿತರೂ, ನಿದ್ರೆಗೆ ಜಾರಿದರೂ, ಮನೆಯಿಂದ ಹೊರಗೆ, ಒಳಗೆ ಎಲ್ಲಿ ಇದ್ದರೂ ನೋಣ ಬಿಟ್ಟು ಬಿಡದೇ ಕಾಡುತ್ತಿವೆ.
Advertisement
Advertisement
20 ವರ್ಷಗಳ ಹಿಂದೆ ರಮಣ ರೆಡ್ಡಿ ಎಂಬವರು ಬಿಸ್ಕೇಟ್ ಫ್ಯಾಕ್ಟರಿ ನೆಪ ಹೇಳಿ, ಕೋಳಿ ಫಾರಂ ಆರಂಭಿಸಿದರು. ವರ್ಷದಲ್ಲಿ ಎರಡ್ಮೂರು ತಿಂಗಳು ನೋಣಗಳ ಕಾಟ ಹೆಚ್ಚಾಗುತ್ತದೆ. ಇದರಿಂದಾಗಿ ಸಾಂಕ್ರಾಮಿಕ ಕಾಯಿಲೆ ಹರಡುತ್ತದೆ ಎನ್ನುವ ಭೀತಿ ಎದುರಾಗಿದ್ದು, ಗ್ರಾಮ ಬಿಟ್ಟು ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.
Advertisement
ಶಾಲೆಯಲ್ಲಿ ಮಕ್ಕಳಿಗಾಗಿ ತಯಾರಿಸಿದ ಬಿಸಿಯೂಟದಲ್ಲಿ ನೋಣ ಬೀಳದಂತೆ ಕಾದು ಕುಳಿತುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಮಕ್ಕಳಂತು ಗೊತ್ತಿಲ್ಲದೆ ನೋಣಗಳು ಬಿದ್ದ ಆಹಾರವನ್ನು ಸೇವನೆ ಮಾಡವಂತಾಗಿದೆ. ಮನೆಗಳಲ್ಲಿ ಅಡುಗೆ ಸಿದ್ಧಪಡಿಸಿ, ಕೆಳಗೆ ಇಟ್ಟರೆ ಸಾಕು, ಪಾತ್ರೆಗಳ ಮೇಲೆ ಜೇನುಗೂಡಿನಂತೆ ನೋಣಗಳು ಕುಳಿತುಕೊಳ್ಳುತ್ತವೆ. ನಮ್ಮ ಸಮಸ್ಯೆಗೆ ಕೂಡಲೇ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.