ದಾವಣಗೆರೆ: ಭಾರತ ಲಾಕ್‍ಡೌನ್ ಆದಾಗಿನಿಂದ ಹಲವು ಬಡ ಕುಟುಂಬಗಳು ಅನ್ನವಿಲ್ಲದೆ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ. ಈ ಮಧ್ಯ ಸಂಕಷ್ಟದಲ್ಲಿದ್ದ ವೃದ್ಧ ತಾಯಿ ಹಾಗೂ ಪಾಶ್ವವಾಯು ಕಾಯಿಲೆಯಿಂದ ಬಳಲುತ್ತಿದ್ದ ಮಗನ ಬಗ್ಗೆ ಪ್ರಸಾರವಾಗಿದ್ದ ಪಬ್ಲಿಕ್ ಟಿವಿ ವರದಿಗೆ ಸ್ಪಂದಿಸಿದ ದಾವಣಗೆರೆಯ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿಯವರು ತಾಯಿ, ಮಗನ ನೆರವಿಗೆ ನಿಂತಿದ್ದಾರೆ.
ದಾವಣಗೆರೆಯ ಯಲ್ಲಮ್ಮ ನಗರದಲ್ಲಿ ನಿವಾಸಿ ಪಕೀರಮ್ಮ ಅವರು ಪಾಶ್ವವಾಯು ಕಾಯಿಲೆಯಿಂದ ಬಳಲುತ್ತಿರುವ ಮಗನೊಂದಿದೆ ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದರು. ಈ ಮನಕಲಕುವ ಸುದ್ದಿಯನ್ನು ಪಬ್ಲಿಕ್ ಟಿವಿ ನಿರಂತರವಾಗಿ ಬಿತ್ತರಿಸಿತ್ತು. ಪಬ್ಲಿಕ್ ಟಿವಿ ಕಳಕಳಿಗೆ ಸ್ಪಂಧಿಸಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಸ್ಥಳಕ್ಕೆ ಭೇಟಿ ನೀಡಿ ವೃದ್ಧೆಗೆ ಸಾಂತ್ವನ ಹೇಳಿ, ಅವರಿಗೆ ಆಹಾರದ ಕಿಟ್ ವಿತರಣೆ ಮಾಡಿ ನಾವು ನಿಮ್ಮ ಜೊತೆ ಇದೀವಿ ಎಂದು ಧೈರ್ಯವನ್ನು ತುಂಬಿದ್ದಾರೆ. ಅಲ್ಲದೆ ವೃದ್ಧೆಯನ್ನು ಹಾಗೂ ಆಕೆಯ ಮಗನನ್ನು ನಿರಾಶ್ರಿತರ ಕೇಂದ್ರಕ್ಕೆ ತಲುಪಿಸುವ ವ್ಯವಸ್ಥೆಯನ್ನು ಮಾಡಿದರು.
ಅಲ್ಲದೆ ಸ್ಥಳದಲ್ಲೇ ಅಧಿಕಾರಿಗಳಿಗೆ ಕರೆ ಮಾಡಿ ತಕ್ಷಣವೇ ಇವರಿಗೆ ವಸತಿ ಸೌಲಭ್ಯವಾಗಬೇಕು ಎಂದು ಆದೇಶ ನೀಡಿದ್ದಾರೆ. ಹಾಗೆಯೇ ಕಟ್ಟಕಡೆಯ ವ್ಯಕ್ತಿಗಳ ಬಗ್ಗೆ ನೀವು ವರದಿ ಮಾಡಿ ನಮ್ಮ ಗಮನಕ್ಕೆ ತರುವುದರಿಂದ ನಮಗೆ ಕೆಲಸ ಮಾಡಲು ಸಾಕಷ್ಟು ಉತ್ಸಾಹ ಬರುತ್ತದೆ ಎಂದು ಜಿಲ್ಲಾಧಿಕಾರಿಗಳು ಪಬ್ಲಿಕ್ ಟಿವಿ ಕಳಕಳಿಗೆ ಅಭಿನಂಧನೆ ತಿಳಿಸಿದರು.