ದಾವಣಗೆರೆ: ಸರ್ಕಾರದ ಕ್ರಮಗಳು ಮತ್ತು ಜನರ ಸಹಕಾರದಿಂದ ಮಾತ್ರ ಕೊರೊನಾ ನಿಗ್ರಹ ಸಾಧ್ಯ. ಜನರ ಜೀವ ಮತ್ತು ಜೀವನವನ್ನು ಸುಸ್ಥಿತಿಗೆ ತರಲು ಸರ್ಕಾರ ಹಗಲಿರುಳು ಶ್ರಮಿಸುತ್ತಿದ್ದು, ಜನರು ಸಹಕರಿಸಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿಕೊಂಡಿದ್ದಾರೆ.
ಜಿಲ್ಲಾಡಳಿತ ಭವನದದಲ್ಲಿ ಇಂದು ಏರ್ಪಡಿಸಲಾಗಿದ್ದ ಕೋವಿಡ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಚಿವರು, ಕೊರೊನಾ ನಿಗ್ರಹ ಹಿನ್ನೆಲೆ ರಾಜ್ಯದಲ್ಲಿರುವ 60 ಮೆಡಿಕಲ್ ಕಾಲೇಜುಗಳಲ್ಲಿ ಕೋವಿಡ್ ಪರೀಕ್ಷೆ ಲ್ಯಾಬ್ ಸ್ಥಾಪಿಸಲು ಸರ್ಕಾರ ಈಗಾಗಲೇ ಆದೇಶಿಸಿದ್ದು, ಮೇ ಅಂತ್ಯದೊಳಗೆ ಪ್ರತಿ ಜಿಲ್ಲೆಯಲ್ಲಿ 2 ಪರೀಕ್ಷಾ ಲ್ಯಾಬ್ ಸಿದ್ಧಗೊಳ್ಳುವ ವಿಶ್ವಾಸವಿದೆ. ಅಲ್ಲದೆ ದಾವಣಗೆರೆಯ ಎಸ್‍ಎಸ್ ಹೈಟೆಕ್ ಆಸ್ಪತ್ರೆಯ ಪಿಸಿಆರ್ ಲ್ಯಾಬ್‍ನಲ್ಲಿ ಶನಿವಾರದಿಂದ ಕೋವಿಡ್ ಪರೀಕ್ಷೆ ಆರಂಭಗೊಳ್ಳಲಿದ್ದು, ಅದಕ್ಕೆ ಚಾಲನೆ ನೀಡುತ್ತಿರುವುದು ಸಂತಸದ ವಿಷಯ ಎಂದರು.
Advertisement
Advertisement
ನಗರದ ಸಿ.ಜಿ.ಆಸ್ಪತ್ರೆಯಲ್ಲಿಯೂ ಕೋವಿಡ್ ಪರೀಕ್ಷೆ ಲ್ಯಾಬ್ ಕಾರ್ಯಾರಂಭಗೊಂಡಿದ್ದು, ಭಾನುವಾರದಿಂದ ಆರ್‍ಟಿಪಿಸಿಆರ್ ಮೆಷಿನ್‍ಗಳನ್ನು ಅಳವಡಿಸಲು ತಿಳಿಸಿದ್ದೇನೆ. ಇನ್ನೊಂದು ಎರಡು ದಿನಗಳಲ್ಲಿ ಸಿಜಿ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟಿಂಗ್ ಲ್ಯಾಬ್ ಸಿದ್ಧಗೊಳ್ಳಲಿದ್ದು ಇದರಿಂದ ಜಿಲ್ಲೆಗೆ ಅನುಕೂಲವಾಗಲಿದೆ. ಪರೀಕ್ಷೆಗಾಗಿ ಜನರು ದಿನಗಳಟ್ಟಲೆ ಕಾಯುವುದು ತಪ್ಪುತ್ತದೆ. ಖಾಸಗಿ ಲ್ಯಾಬ್‍ಗಳಿಗೆ ದರ ನಿಗದಿಗೊಳಿಸಿದ್ದು, ಸರ್ಕಾರದ ವತಿಯಿಂದಲೇ ಕಿಟ್‍ಗಳನ್ನು ಒದಗಿಸುವ ವ್ಯವಸ್ಥೆ ಮಾಡಲಾಗುವುದು ಎಂದರು.
Advertisement
ಇಡೀ ಜಗತ್ತನ್ನು ಕಣ್ಣಿಗೆ ಕಾಣದೊಂದು ವೈರಾಣು ನಡುಗಿಸುತ್ತಿದೆ. ವಿಶ್ವದಲ್ಲಿ ಬೇರೆ ರಾಷ್ಟ್ರಗಳಿಗೆ ಹೋಲಿಸಿದರೆ ನಮ್ಮ ದೇಶ ಕೊರೊನಾ ನಿಯಂತ್ರಣ ಮಾಡುತ್ತಿದೆ. ದೇಶದಲ್ಲಿ ಸುಮಾರು 60 ಸಾವಿರ ಜನರಿಗೆ ಸೋಂಕು ತಗುಲಿದ್ದು, ನಮ್ಮ ರಾಜ್ಯ ಸೋಂಕಿತರ ಪಟ್ಟಿಯಲ್ಲಿ 13ನೇ ಸ್ಥಾನದಲ್ಲಿ ಇದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆರಂಭದಲ್ಲಿ ತೆಗೆದುಕೊಂಡ ಮುನ್ನೆಚ್ಚರಿಕೆ ಕ್ರಮಗಳಿಂದಾಗಿ ರಾಜ್ಯದಲ್ಲಿ ಕೊರೊನಾ ನಿಯಂತ್ರಣ ಸಾಧ್ಯವಾಗುತ್ತಿದೆ ಎಂದರು.
Advertisement
ಜೀವ ಉಳಿಸುವ ಜೊತೆಗೆ ಜನಜೀವನ ಸುಧಾರಣೆ ಎರಡೂ ಕೆಲಸಗಳನ್ನು ಸಮತೋಲನದಿಂದ ಸರಿದೂಗಿಸಬೇಕಿದೆ. ಕೊರೊನಾ ಕೂಡ ಇರುತ್ತದೆ. ಆದರೆ ನಾವು ಅದರಿಂದ ದೂರ ಇರಬೇಕು. ನಾಲ್ಕು ಟಿ ಅಂದರೆ ಟ್ರ್ಯಾಕಿಂಗ್, ಟ್ರೇಸಿಂಗ್, ಟೆಸ್ಟಿಂಗ್ ಮತ್ತು ಟ್ರೀಟ್‍ಮೆಂಟ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಕೊರೊನಾ ನಿಗ್ರಹಿಸಲಾಗುತ್ತಿದೆ. ಕೊರೊನಾ ನಿಯಂತ್ರಣ ಕೇವಲ ಸರ್ಕಾರದ ಕೈಯಲ್ಲಿಲ್ಲ ಬದಲಾಗಿ ಎಲ್ಲ ಜನತೆ ಸಹಕಾರ ಅತ್ಯಗತ್ಯವಾಗಿದೆ ಎಂದು ಹೇಳಿದರು.
ಅನಗತ್ಯ ಆತಂಕ ಬೇಡ:
ಕೊರೊನಾ ರೋಗಕ್ಕೆ ನಿಖರವಾದ ಚಿಕಿತ್ಸೆ ಇಲ್ಲ. ಎಷ್ಟೋ ಅಂತೆ-ಕಂತೆಗಳು ಆಗಿ ಹೋಗಿವೆ. ಈ ನಿಟ್ಟಿನಲ್ಲಿ ಸರ್ಕಾರ ಪ್ರತಿದಿನ ಹೊಸ ಮಾರ್ಗಸೂಚಿಗಳನ್ನು ನೀಡುವ ಮೂಲಕ ಕೊರೊನಾ ನಿಯಂತ್ರಣದಲ್ಲಿ ಶ್ರಮ ವಹಿಸುತ್ತಿದೆ. ಕೊರೊನಾ ಸಾಮಾಜಿಕ ಕಳಂಕ ಅಲ್ಲ. ಯಾರಿಗೆ ಬೇಕಾದರೂ ಬರಬಹುದು. ಸೋಂಕಿನ ಬಗ್ಗೆ ಭಯ ಬೇಡ. ಯಾವ ವೈರಾಣುವೂ ಜನರನ್ನು ಸೋಲಿಸಿಲ್ಲ. ಬದಲಾಗಿ ಜನರು ವೈರಾಣುವನ್ನು ಸೋಲಿಸಿದ್ದಾರೆ. ಕೊರೊನಾವನ್ನೂ ಸೋಲಿಸಲು ಸ್ವಲ್ಪ ಸಮಯ ಬೇಕು. ಆದ ಕಾರಣ ಜನರು ಅಂತರ ಕಾಯ್ದುಕೊಳ್ಳುವ ಮೂಲಕ, ಸ್ವಚ್ಛತೆ, ಮಾಸ್ಕ್ ಧರಿಸುವ ಮೂಲಕ ಹಾಗೂ ಸರ್ಕಾರದ ನಿಯಮ, ಸೂಚನೆಗಳನ್ನು ಪಾಲಿಸುವ ಮೂಲಕ ಕೊರೊನಾ ನಿಗ್ರಹಿಸಲು ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು.
ದಾವಣಗೆರೆಯ ಎಸ್ ಎಸ್ ಮೆಡಿಕಲ್ ಕಾಲೇಜ್ ನಲ್ಲಿ ನೂತನ ವಾಗಿ ಸ್ಥಾಪಿಸಿರುವ ಕೋವಿಡ್ ಪರೀಕ್ಷಾ ಲ್ಯಾಬ್ ಅನ್ನು ಉದ್ಘಾಟಿಸಿದೆ.ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜು, ಸಂಸದ ಜಿ.ಎಂ. ಸಿದ್ದೇಶ್ವರ, ಹಿರಿಯ ಶಾಸಕ ಶ್ಯಾಮನೂರ ಶಿವಶಂಕಪ್ಪ ಹಾಗೂ ಜಿಲ್ಲೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು. pic.twitter.com/jcHJYu3Ff8
— Dr Sudhakar K (@mla_sudhakar) May 9, 2020
ಮಾಹಿತಿ, ಧೈರ್ಯ ತುಂಬಬೇಕು:
ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಬಂದವರ ಪೈಕಿ ಈಗಾಗಲೇ ಶೇ.50 ಗುಣಮುಖರಾಗಿದ್ದಾರೆ. ಶೇ.80ರಷ್ಟು ಜನರು ಚಿಕಿತ್ಸೆ ಇಲ್ಲದೆಯೇ ಗುಣಮುಖರಾಗುತ್ತಾರೆ. ಮರಣ ಪ್ರಮಾಣ ಶೇ.3.1 ರಷ್ಟಿದ್ದು, ಅದರಲ್ಲೂ ಹೃದಯ ತೊಂದರೆ, ಕ್ಯಾನ್ಸರ್, ಡಯಾಬಿಟಿಕ್ ಇತರೆ ತೊಂದರೆಯಿಂದ ಬಳಲುವವರು ಮರಣಕ್ಕೆ ತುತ್ತಾಗುವ ಸಂಭವ ಹೆಚ್ಚಿದೆ. ಆದ್ದರಿಂದ ಜನರಲ್ಲಿ ಭಯ ಬೇಡ. ಆದರೆ ಅಂತರ ಕಾಯ್ದುಕೊಂಡು, ಸ್ವಚ್ಛತೆ ಕಾಪಾಡಿಕೊಂಡು ನಿಯಮಗಳನ್ನು ಪಾಲಿಸಬೇಕು. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಜನರಿಗೆ ಸಮರ್ಪಕ ಮಾಹಿತಿ ಮತ್ತು ಧೈರ್ಯವನ್ನು ತುಂಬಬೇಕು ಎಂದರು.
ಆರೋಗ್ಯಸೇತು ಆ್ಯಪ್:
ಜಿಲ್ಲೆಯ ಎಲ್ಲ ಜನತೆ ಆರೋಗ್ಯಸೇತು ಆ್ಯಪ್ ಅನ್ನು ಡೌನ್‍ಲೋಡ್ ಮಾಡಿಕೊಳ್ಳಬೇಕು. ಜನಪ್ರತಿನಿಧಿಗಳು, ಅಧಿಕಾರಿಗಳು ಈ ಆಪ್ ಬಗ್ಗೆ ಸಾಕಷ್ಟು ಪ್ರಚಾರ ನೀಡಬೇಕು. ಈ ಆ್ಯಪ್‍ನ ಸಹಾಯದಿಂದ ತಾವು ಸೋಂಕಿತರಿಂದ ಎಷ್ಟು ಅಂತರದಲ್ಲಿದ್ದೀರಿ ಎಂದು ತಿಳಿಯುತ್ತದೆ ಹಾಗೂ ಸೋಂಕಿತರು ಹತ್ತಿರ ಬಂದರೆ ಸೂಚನೆ ನೀಡುತ್ತದೆ. ಆದ್ದರಿಂದ ಎಲ್ಲರೂ ಈ ಆ್ಯಪ್ ಅನ್ನು ಡೌನ್‍ಲೋಡ್ ಮಾಡಿ ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ಮಾತನಾಡಿ, ಜಿಲ್ಲಾಸ್ಪತ್ರೆಯಲ್ಲಿ ಇನ್ನೂ ಪರಿಣಾಮಕಾರಿಯಾಗಿ ಕೋವಿಡ್ ನಿಯಂತ್ರಣ ಹಿನ್ನೆಲೆ ಕೆಲಸ ಆಗಬೇಕು. ಇಂದಿನಿಂದಲೇ ನಾನ್ ಕೋವಿಡ್ ಸೇವೆಗಳನ್ನು ಬಾಪೂಜಿ, ಎಸ್‍ಎಸ್ ಇತರೆ ಆಸ್ಪತ್ರೆಗಳಿಗೆ ಕಳುಹಿಸಬೇಕು. ಜಿಲ್ಲಾಸ್ಪತ್ರೆಯ ಆವರಣದಲ್ಲಿರುವ ಹೆರಿಗೆ ವಿಭಾಗವನ್ನು ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ವರ್ಗಾಯಿಸಿ, ಕೋವಿಡ್ ಆಸ್ಪತ್ರೆಯಲ್ಲಿ ಕೇವಲ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವಂತೆ ವ್ಯವಸ್ಥೆ ಆಗಬೇಕು ಎಂದು ಸೂಚಿಸಿದರು.