ದಾವಣಗೆರೆ: ಜಿಲ್ಲೆಯಲ್ಲಿ ಮೊದಲ ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗಿದ್ದು, ಫ್ರಾನ್ಸ್ ನಿಂದ ದಾವಣಗೆರೆಗೆ ಬಂದಿದ್ದ ವ್ಯಕ್ತಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ. ಸೋಂಕಿತ ವ್ಯಕ್ತಿ ಎಲ್ಲೆಲ್ಲಿ ಪ್ರಯಾಣಿಸಿದ್ದ ಎಂಬ ಬಗ್ಗೆ ಜಿಲ್ಲಾಡಳಿತ ಮಾಹಿತಿ ನೀಡಿದೆ.
ಮಾರ್ಚ್ 17ರಂದು ಫ್ರಾನ್ಸ್ ನಿಂದ ಅಬುದಾಭಿ ಮುಖಾಂತರ ವಿಮಾನದಲ್ಲಿ ಬೆಳಗ್ಗೆ 11:30ಕ್ಕೆ ಸೋಂಕಿತ ವ್ಯಕ್ತಿ ಹೊರಟಿದ್ದರು. ಮಾರ್ಚ್ 18ರಂದು ಬೆಳಗ್ಗೆ 6 ಗಂಟೆಗೆ ಬೆಂಗಳೂರು ತಲುಪಿದ ಸೋಂಕಿತ ವೋಲ್ವೋ ಬಸ್ ಮುಖಾಂತರ ಬೆಳಗ್ಗೆ 8 ಗಂಟೆಗೆ ಮೆಜೆಸ್ಟಿಕ್‍ನ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಬಂದು ತಲುಪಿದ್ದರು. ಮೆಜೆಸ್ಟಿಕ್‍ನಿಂದ ರಾಜಹಂಸ ಬಸ್ಸಿನಲ್ಲಿ ಬೆಳಗ್ಗೆ 10 ಗಂಟೆಗೆ ಹೊರಟು ಮಧ್ಯಾಹ್ನ 4 ಗಂಟೆಗೆ ದಾವಣಗೆರೆಗೆ ಬಂದಿಳಿದು, ತಮ್ಮ ಸ್ವಂತ ಕಾರಿನಲ್ಲಿ ಮನೆಗೆ ಹೋಗಿದ್ದರು.
Advertisement
Advertisement
ಸೋಂಕಿತ ವ್ಯಕ್ತಿಯ ಪ್ರಯಾಣ ಮಾಹಿತಿಯು ವಿಮಾನ ನಿಲ್ದಾಣದ ಪ್ರಾಧಿಕಾರದ ಮುಖಾಂತರ ಮಾರ್ಚ್ 18ರ ಮಧ್ಯರಾತ್ರಿ ಜಿಲ್ಲಾ ಸರ್ವೇಕ್ಷಣ ಘಟಕಕ್ಕೆ ಲಭ್ಯವಾಗಿತ್ತು. ಬಳಿಕ ಮಾರ್ಚ್ 22ರಂದು ವ್ಯಕ್ತಿಯನ್ನು ಸಂಪರ್ಕಿಸಿ ಕೋವಿಡ್-19 ಮಾರ್ಗಸೂಚಿಗಳನ್ವಯ ಕ್ರಮ ಕೈಗೊಳ್ಳಲಾಗಿತ್ತು.
Advertisement
ಆದರೆ ಮಾರ್ಚ್ 25ರಂದು ವ್ಯಕ್ತಿಯಲ್ಲಿ ಕೆಮ್ಮು, ಗಂಟಲು ನೋವು, ಜ್ವರ ಕಾಣಿಸಿಕೊಂಡಿದ್ದು ಅವರನ್ನು ತಪಾಸಣೆ ಒಳಪಡಿಸಲಾಗಿತ್ತು. ಇಂದು ವ್ಯಕ್ತಿಯ ವೈದ್ಯಕೀಯ ಪರೀಕ್ಷೆಯ ವರದಿ ಬಂದಿದ್ದು, ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಸದ್ಯ ಸೋಂಕಿತ ವ್ಯಕ್ತಿಯನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗಿದ್ದು, ಸೋಂಕಿತ ಒಟ್ಟು 18 ಮಂದಿ ಜೊತೆ ನೇರ ಸಂಪರ್ಕ ಹೊಂದಿದ್ದರು ಎಂಬ ಮಾಹಿತಿ ಲಭ್ಯವಾಗಿದ್ದು, ಅವರನ್ನೂ ಕೂಡ ತಪಾಸಣೆಗೆ ಒಳಪಡಿಸಲಾಗಿದೆ.