ಬೆಂಗಳೂರು: ಹರಿಪ್ರಿಯಾ ನಟನೆಯ ಇಪ್ಪತೈದನೇ ಚಿತ್ರವೆಂಬುದೂ ಸೇರಿದಂತೆ ನಾನಾ ಕಾರಣಗಳಿಂದ ನಿರೀಕ್ಷೆ ಹುಟ್ಟಿಸಿದ್ದ ಚಿತ್ರ ಡಾಟರ್ ಆಫ್ ಪಾರ್ವತಮ್ಮ. ಯಾವುದೇ ಅಬ್ಬರವಿಲ್ಲದ ನಿರೂಪಣೆ, ನಮ್ಮ ಆಸುಪಾಸಲ್ಲಿಯೇ ಕಥೆ ಘಟಿಸುತ್ತಾ ಪಾತ್ರಗಳು ಚಲಿಸಿದಂತೆ ಭಾಸವಾಗುವಷ್ಟು ವಾಸ್ತವಿಕ ದೃಶ್ಯಗಳ ಜೊತೆ ಜೊತೆಗೇ ಡೋಂಟ್ ಕೇರ್ ಸ್ವಭಾವದ ಪಾರ್ವತಮ್ಮನ ಮಗಳ ಸ್ಟೋರಿ ಬಿಚ್ಚಿಕೊಳ್ಳುತ್ತೆ.
Advertisement
ಜೆ ಶಂಕರ್ ಇದೊಂದು ಭಿನ್ನ ಶೈಲಿಯ ಕಮರ್ಶಿಯಲ್ ಚಿತ್ರ ಎಂಬ ಸುಳಿವನ್ನು ಆರಂಭದಲ್ಲಿಯೇ ಜಾಹೀರು ಮಾಡಿದ್ದರು. ಆದ್ದರಿಂದಲೇ ಮಾಮೂಲಿ ಮೆಥಡ್ಡಿನ ನಾಯಕಿ ಪ್ರಧಾನ ಚಿತ್ರಗಳಿಗಿಂತ ಸಂಪೂರ್ಣವಾಗಿ ಬೇರೆ ರೀತಿಯಲ್ಲಿ ಈ ಸಿನಿಮಾ ಪ್ರೇಕ್ಷಕರಿಗೆಲ್ಲ ಆಪ್ತವಾಗುತ್ತೆ.
Advertisement
Advertisement
ನಾಯಕಿ ಶಾಲಾ ಕಾಲೇಜು ಹಂತದಿಂದಲೇ ಬೋಲ್ಡ್ ವ್ಯಕ್ತಿತ್ವ ಹೊಂದಿರುವಾಕೆ. ಈಕೆಯ ಖದರಿನ ಮುಂದೆ ಗಂಡು ಹೈಕಳೇ ಮಂಕು ಬಡಿಯುತ್ತವೆ. ಅಂಥಾ ಡೋಂಟ್ ಕೇರ್ ಸ್ವಭಾವದ ಹುಡುಗಿ ಪಾರ್ವತಮ್ಮನ ಮುದ್ದಿನ ಮಗಳು. ಆಕೆಯ ಬದುಕಲ್ಲಿಯೂ ಕೂಡಾ ಹಲವಾರು ನೋವು, ನಿರಾಸೆಗಳಿರುತ್ತವೆ. ಆದರೆ ಅದ್ಯಾವುದೂ ಕೂಡಾ ತನ್ನ ಪಾದರಸದಂಥಾ ವ್ಯಕ್ತಿತ್ವವನ್ನು ಘಾಸಿಗೊಳಿಸದಂತೆ ನೋಡಿಕೊಂಡು ಮುಂದುವರೆಯೋ ಪಾರ್ವತಮ್ಮನ ಮಗಳು ಕಡೆಗೂ ಕಷ್ಟಪಟ್ಟು ಓದಿ ಪೊಲೀಸ್ ಅಧಿಕಾರಿಯಾಗುತ್ತಾಳೆ. ಎಂಥಾ ಕ್ಲಿಷ್ಟಕರವಾದ ಕೇಸನ್ನೇ ಆದರೂ ಲೀಲಾಜಾಲವಾಗಿ ಬೇಧಿಸೋ ಚಾಕಚಕ್ಯತೆಯೊಂದಿಗೆ ಹೆಸರುವಾಸಿಯಾಗುತ್ತಾಳೆ.
Advertisement
ಇಂಥಾ ಪೊಲೀಸ್ ಅಧಿಕಾರಿಣಿ ಪಾರ್ವತಮ್ಮನ ಮಗಳ ಮುಂದೆ ಭಯಾನಕವಾದೊಂದು ಪ್ರಕರಣ ತನಿಖೆಗಾಗಿ ಬರುತ್ತದೆ. ಅದು ವೈದ್ಯೆಯೊಬ್ಬಳ ಅಸಹಜ ಸಾವಿನ ಪ್ರಕರಣ. ಅದರಲ್ಲಿ ವೈದ್ಯಕೀಯ ವರದಿ ಸೇರಿದಂತೆ ಎಲ್ಲವೂ ಒಂದಕ್ಕೊಂದು ತದ್ವಿರುದ್ಧವಾಗಿರುತ್ತವೆ. ಈ ಪ್ರಕರಣದ ಸಿಕ್ಕನ್ನು ಪಾರ್ವತಮ್ಮನ ಮಗಳು ಹೇಗೆ ಬಿಡಿಸುತ್ತಾಳೆಂಬುದರ ಸುತ್ತ ಈ ಕಥೆ ರೋಚಕವಾಗಿ, ಯಾವುದೇ ಅಬ್ಬರಗಳಿಲ್ಲದೆ ಸಾಗುತ್ತೆ.
ಇಂಥಾ ಪೊಲೀಸ್ ವೃತ್ತಿ, ಇನ್ವೆಸ್ಟಿಗೇಷನ್ನುಗಳಾಚೆಗೆ ಪಾರ್ವತಮ್ಮನ ಮಗಳ ಕಥೆ ಮನಸಿಗೆ ನಾಟುತ್ತೆ. ಆಕೆ ಒಳಿತೆಲ್ಲವನ್ನು ಮಗುಮನಸಿನಿಂದ ಸ್ವೀಕರಿಸುತ್ತಾ, ಅನ್ಯಾಯವನ್ನು ನಿಂತ ನಿಲುವಿನಲ್ಲಿಯೇ ಪ್ರತಿಭಟಿಸೋ ಹೆಣ್ಣುಮಗಳಾಗಿ ಎಲ್ಲರ ಮನಸಿಗಿಳಿಯುತ್ತಾಳೆ. ತೀರಾ ಯಾರಾದರೂ ಹುಡುಗ ಇಷ್ಟವಾದರೆ ನೇರಾನೇರ ಹೋಗಿ ಪ್ರಪೋಸ್ ಮಾಡಿ ಬಿಡುವಂಥಾ ಈ ಗಟ್ಟಿಗಿತ್ತಿಯ ಪಾಲಿಗೆ ಅಮ್ಮ ಪಾರ್ವತಮ್ಮ ನಿಜವಾದ ಶಕ್ತಿ. ಆ ಪಾತ್ರದಲ್ಲಿ ಸುಮಲತಾ ಅಂಬರೀಶ್ ನಟಿಸಿದ್ದಾರೆ. ತಾಯ್ತನದ ಎಲ್ಲ ಭಾವಗಳನ್ನೂ ಹೊಂದಿರೋ ಈ ಪಾತ್ರದ ಮೂಲಕ ಅವರ ಎಲ್ಲರನ್ನೂ ಆವರಿಸಿಕೊಳ್ಳುತ್ತಾರೆ.
ನಾಯಕಿ ಪ್ರಧಾನ ಚಿತ್ರಗಳಲ್ಲಿರೋ ಯಾವ ಅಬ್ಬರವೂ ಇಲ್ಲಿಲ್ಲ. ಆದರೆ ನಿರ್ದೇಶಕ ಜೆ ಶಂಕರ್ ಅವರು ಅದೊಂದು ಕೊರತೆ ಅನ್ನಿಸದಂತೆ ದೃಶ್ಯ ಕಟ್ಟಿದ್ದಾರೆ. ಯಾಕೆಂದರೆ ಹರಿಪ್ರಿಯಾ ಪಾರ್ವತಮ್ಮನ ಮಗಳಾಗಿ ಯಾವ ಮೆರೆದಾಟವೂ ಇಲ್ಲದೆ ನೋಡುಗರ ಮನಸು ಮುಟ್ಟುತ್ತಾರೆ. ನಿರ್ಮಾಪಕರಾದ ಶಶಿಧರ್ ಕೆ ಎಂ ಅವರೂ ಕೂಡಾ ಡಾಕ್ಟರ್ ಪಾತ್ರದಲ್ಲಿ ಮಿಂಚಿದ್ದಾರೆ. ತರಂಗ ವಿಶ್ವ ಸೇರಿದಂತೆ ಎಲ್ಲರೂ ತಂತಮ್ಮ ಪಾತ್ರಗಳಿಗೇ ಬೇರೆಯದ್ದೇ ಟಚ್ ನೀಡಿದ್ದಾರೆ. ಈ ಮೂಲಕವೇ ಜೆ ಶಂಕರ್ ಭಿನ್ನ ಬಗೆಯ, ಕ್ರಿಯೇಟಿವ್ ನಿರ್ದೇಶಕರಾಗಿ ನೆಲೆ ನಿಲ್ಲುವ ಸೂಚನೆಯನ್ನೂ ರವಾನಿಸಿದ್ದಾರೆ. ಎಂಥಾ ಪಾತ್ರಗಳಿಗಾದರೂ ಹೊಂದಿಕೊಳ್ಳುವ ಹರಿಪ್ರಿಯಾ ಪಾರ್ವತಮ್ಮನ ಮಗಳಾಗಿ ಮತ್ತಷ್ಟು ಇಷ್ಟವಾಗುತ್ತಾರೆ. ಇದು ಎಲ್ಲರೂ ನೋಡಲೇ ಬೇಕಾದ ವಿಶಿಷ್ಟವಾದ ಚಿತ್ರ.
ರೇಟಿಂಗ್: 3.5/5