ಹೈದ್ರಾಬಾದ್: ಮನೆಯಲ್ಲಿದ್ದ ಹಣದೊಂದಿಗೆ ಪರಾರಿಯಾಗಿದ್ದ ಮಾವ ಮತ್ತು ಸೊಸೆ ಇಬ್ಬರೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣ ರಾಜ್ಯದ ಕಮ್ಮಮಂ ಜಿಲ್ಲೆಯ ಎರ್ರಬೋಡು ಗ್ರಾಮದಲ್ಲಿ ನಡೆದಿದೆ.
ಸೊಸೆ ಅನಿತಾ ಮತ್ತು ಮಾವ ವೀರಣ್ಣ ಆತ್ಮಹತ್ಯೆ ಶರಣಾದವರು. ಅನಿತಾ ನಾಲ್ಕು ವರ್ಷಗಳ ಹಿಂದೆ ವೀರಣ್ಣನ ಮಗ ಶ್ರೀಕಾಂತ್ ಎಂಬವರೊಂದಿಗೆ ವಿವಾಹವಾಗಿದ್ದಳು. ಆದರೆ ಕಳೆದ ಎರಡು ವರ್ಷಗಳಿಂದ ಅನಿತಾ ಮತ್ತು ಮಾವ ವೀರಣ್ಣ ಅಕ್ರಮ ಸಂಬಂಧ ಹೊಂದಿದ್ದರು.
ಒಂದು ತಿಂಗಳು ಹಿಂದೆ ಅನಿತಾ ಮತ್ತು ವೀರಣ್ಣ ಮನೆಯಲ್ಲಿದ್ದ 1 ಲಕ್ಷ ರೂ. ನಗದು ಹಣದೊಂದಿಗೆ ಪರಾರಿಯಾಗಿದ್ದರು. ಅನಿತಾ ಹೋಗುವಾಗ ಪತಿ ಶ್ರೀಕಾಂತನ ಎಟಿಎಂ ಕಾರ್ಡ್ ತೆಗದುಕೊಂಡು ಹೋಗಿ ಸುಮಾರು 1 ಲಕ್ಷ ರೂ. ಹಣ ಡ್ರಾ ಮಾಡಿದ್ದಳು. ಈ ಸಂಬಂಧ ಅನಿತಾಳ ಪತಿ ಶ್ರೀಕಾಂತ್ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಹೆಂಡತಿ ಮತ್ತು ತಂದೆ ಕಾಣೆಯಾಗಿದ್ದಾರೆ ಎಂದು ದೂರು ದಾಖಲಿಸಿದ್ದರು.
ಈ ವೇಳೆ ಶ್ರೀಕಾಂತ್ ತಮ್ಮ ಬ್ಯಾಂಕ್‍ನ ಎಟಿಎಂ ಅಕೌಂಟ್‍ನ್ನು ಕ್ಲೋಸ್ ಮಾಡಿಸಿದ್ದರು. ಕೈಯಲ್ಲಿದ್ದ ಹಣ ಖಾಲಿಯಾದ ಬಳಿಕ ಸ್ವಗ್ರಾಮಕ್ಕೆ ಮಾವ ಮತ್ತು ಸೊಸೆ ಮರಳಿ ಬಂದಿದ್ದರು. ಊರಿಗೆ ಬಂದ್ಮೇಲೆ ಅವಮಾನದಿಂದ ತತ್ತರಿಸಿದ ಇಬ್ಬರು ವಿಷ ಸೇರಿಸಿ ಕುಡಿದು, ಬ್ಲೇಡ್‍ನಿಂದ ಕೈ ಕುಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಬ್ಬರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.