– ಒಂದೂವರೆ ತಿಂಗಳಿನಲ್ಲಿ 3 ಬಾರಿ ಆದೇಶ ಬದಲಾವಣೆ
ಬೆಂಗಳೂರು: ದಾಸೋಹ ಯೋಜನೆಯ ವೆಲ್ ಫೇರ್ ಸ್ಕೀಮ್ ಅಡಿ ಸರ್ಕಾರವೇ ಗುರುತಿಸಿದ ಕಲ್ಯಾಣ ಸಂಸ್ಥೆಗಳಿಗೆ, ಸರ್ಕಾರವೇ ಕೊಡುತ್ತಿದ್ದ ಆಹಾರ ಧಾನ್ಯ ಸ್ಥಗಿತಗೊಳಿಸಿದೆ. 2019ರ ನವೆಂಬರ್ 12ರಿಂದ ಡಿಸೆಂಬರ್ 27ವರೆಗೆ ಸರ್ಕಾರ ಮೂರು ಬಾರಿ ಆದೇಶವನ್ನು ಬದಲಿಸಿದೆ. ವೆಲ್ ಫೇರ್ ಸ್ಕಿಮ್ ಅನ್ವಯ ಉಚಿತ ವಸತಿ, ಊಟ ನೀಡುವ ಸಂಸ್ಥೆಗಳಿಗೆ ಪ್ರತಿ ತಿಂಗಳಿಗೆ ಪ್ರತಿಯೊಬ್ಬರಿಗೆ 10 ಕೆಜಿ ಅಕ್ಕಿ ಮತ್ತು 5 ಕೆಜಿ ಗೋಧಿಯಂತೆ ಒಟ್ಟು 15 ಕೆಜಿ ಆಹಾರ ಧಾನ್ಯ ನೀಡಲಾಗುತ್ತಿತ್ತು.
ಸರ್ಕಾರದ 2019 ನವೆಂಬರ್ 12ರಂದು ಅನುಮೋದಿತ 460 ಕಲ್ಯಾಣ ಸಂಸ್ಥೆಗಳ 41,384 ವಿದ್ಯಾರ್ಥಿಗಳಿಗೆ ತಲಾ 10 ಕೆಜಿ ಅಕ್ಕಿ 5 ಕೆಜಿ ಗೋಧಿ ಕೊಡುವ ಆದೇಶ ಮಾಡಲಾಗಿತ್ತು. 13 ಡಿಸೆಂಬರ್ 2019ರ ಆದೇಶದಲ್ಲಿ ಅನುಮೋದಿತ ಒಟ್ಟು 176 ಕಲ್ಯಾಣ ಸಂಸ್ಥೆಗಳು, 11,762 ವಿದ್ಯಾರ್ಥಿಗಳಿಗೆ 10 ಕೆಜಿ ಅಕ್ಕಿ 5 ಕೆಜಿ ಗೋಧಿ ಎಂದು ಆದೇಶಿಸಲಾಗಿತ್ತು. 27 ಡಿಸೆಂಬರ್ 2019ರ ಆದೇಶದಲ್ಲಿ ಅನುಮೋದಿತ 189 ಕಲ್ಯಾಣ ಸಂಸ್ಥೆಗಳಿಗೆ, 13,785 ವಿದ್ಯಾರ್ಥಿಗಳಿಗೆ ಒಟ್ಟು 10 ಕೆಜಿ ಅಕ್ಕಿ 5 ಕೆಜಿ ಗೋಧಿ ಎಂದು ಪ್ರತ್ಯೇಕವಾಗಿ ಒಟ್ಟು ಮೂರು ಆದೇಶ ಹೊರಡಿಸಲಾಗಿದೆ.
Advertisement
Advertisement
ಹೀಗೆ ಒಂದೂವರೆ ತಿಂಗಳಿನಲ್ಲಿ ಮೂರು ಬಾರಿ ಆದೇಶ ಬದಲಾವಣೆ ಆಗಿದೆ. ಇದರ ಅನ್ವಯ ಪರಿಷ್ಕರಣೆ ಮಾಡಿ ಬಿಡುಗಡೆ ಮಾಡಿರುವ ಪಟ್ಟಿಯಿಂದ ಕೆಲವು ಕಲ್ಯಾಣ ಸಂಸ್ಥೆಗಳನ್ನು ಕೈ ಬಿಡಲಾಗಿದೆ. ಅದರಲ್ಲಿ ಪ್ರಮುಖವಾಗಿ ಸಿದ್ದಗಂಗಾ ಮಠ, ಆದಿಚುಂಚನಗಿರಿ ಮಠ ಹಾಗೂ ಸುತ್ತೂರು ಮಠಕ್ಕೆ ನೀಡಲಾಗುತ್ತಿದ್ದ ಆಹಾರ ಧಾನ್ಯದ ಹಂಚಿಕೆ ನಿಲ್ಲಿಸಲಾಗಿದೆ.
Advertisement
ಆದಿ ಚುಂಚನಗಿರಿ ಮಠದಲ್ಲಿ ಪ್ರತಿ ತಿಂಗಳು ಒಟ್ಟು 26,22 ಮಕ್ಕಳಿಗೆ 26,220 ಕೆಜಿ ಅಕ್ಕಿ ಹಾಗೂ 13,110 ಕೆಜಿ ಗೋಧಿ ಸ್ಥಗಿತಗೊಳಿಸಲಾಗಿದೆ. ಜೆಎಸ್‍ಎಸ್ ವಿದ್ಯಾರ್ಥಿ ನಿಲಯ ಮೈಸೂರು ಮತ್ತು ಜೆಎಸ್‍ಎಸ್ ಫಿಸಿಕಲ್ ಹ್ಯಾಂಡಿಕ್ಯಾಪ್ಟ್ ವರ್ಕಿಂಗ್ ವುಮನ್ ಅಂಡ್ ಸ್ಟೂಡೆಂಟ್ ಹಾಸ್ಟೆಲ್ ಸೇರಿ ಪ್ರತಿ ತಿಂಗಳು ಒಟ್ಟು 2086 ವಿದ್ಯಾರ್ಥಿಗಳಿಗೆ 20,860 ಕೆಜಿ ಅಕ್ಕಿ 10,427 ಕೆಜಿ ಗೋಧಿ, ತುಮಕೂರು ಸಿದ್ದಗಂಗಾ ಮಠಕ್ಕೆ ಪ್ರತಿ ತಿಂಗಳು ಒಟ್ಟು 7,359 ವಿದ್ಯಾರ್ಥಿಗಳಿಗೆ 73,590 ಕೆಜಿ ಅಕ್ಕಿ ಹಾಗೂ 36,795 ಕೆಜಿ ಗೋಧಿ ನೀಡಲಾಗುತ್ತಿತ್ತು. ಆ ಎಲ್ಲಾ ಸಂಸ್ಥೆಗಳಿಗೆ ನೀಡುತ್ತಿದ್ದ ಆಹಾರ ಧಾನ್ಯ ಸ್ಥಗಿತ ಮಾಡಲಾಗಿದೆ. ಹೀಗೆ ಬೇರೆ ಬೇರೆ ಆದೇಶಗಳಲ್ಲಿ ಹಂತ ಹಂತವಾಗಿ 271 ಕಲ್ಯಾಣ ಸಂಸ್ಥೆಗಳನ್ನು ಕೈ ಬಿಡಲಾಗಿದೆ.
Advertisement
ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು, ಮಠಕ್ಕೆ ಪೂರೈಕೆ ಆಗುತ್ತಿದ್ದ ಅಕ್ಕಿ ಹಾಗೂ ಗೋಧಿ ಎರಡು ತಿಂಗಳಿಂದ ಬಂದಿಲ್ಲ. ಮಠಕ್ಕೆ ಪೂರೈಕೆಯಾಗುತ್ತಿದ್ದ ರೇಷನ್ ಎಷ್ಟು ಬಳಕೆಯಾಗುತ್ತಿದೆ ಎಂಬ ಬಗ್ಗೆ ರಾಜ್ಯ ಸರ್ಕಾರ ಮಾಹಿತಿ ಕೇಳಿತ್ತು. ಅದರಂತೆ ನಾವು ಸೂಕ್ತ ದಾಖಲೆ, ಮಾಹಿತಿ ಸಲ್ಲಿಸಿದ್ದೇವೆ. ಆದರೆ ಕೆಲ ಸಂಸ್ಥೆಗಳು ಸರಿಯಾದ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಸರ್ಕಾರ ಅಕ್ಕಿ ಹಾಗೂ ಗೋಧಿ ವಿತರಣೆಯನ್ನು ನಿಲ್ಲಿಸಿರಬಹುದು. ಮುಂದಿನ ದಿನಗಳಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ರೇಷನ್ ಪೂರೈಕೆ ಮಾಡುತ್ತದೆ ಎಂಬ ಭರವಸೆ ಇದೆ ಎಂದು ತಿಳಿಸಿದ್ದರು.